ವಿಜಯಪುರ: ಇನ್ನೇನು 20 ದಿನ ಬಿಜೆಪಿ ಸರ್ಕಾರದ ಅವಧಿ ಉಳಿದಿದೆ. ಅವರು ವಿದಾಯ ಹೇಳುವ ಕಾಲ ಬಂದಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು. ವಿಜಯಪುರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷದಲ್ಲಿ 40 ಪರ್ಸೆಂಟ್ ಸರ್ಕಾರವನ್ನು ಬಿಜೆಪಿ ನೀಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಂದ್ರೆ ಸಾಕು ಪೇಸಿಎಂ ಎನ್ನುವಂತಾಗಿದೆ. ಪ್ರತಿ ಮಾತಿನಲ್ಲೂ ಜನರನ್ನು ಲೂಟಿ ಹೊಡೆಯುವುದು, ಖಜಾನೆ ಲೂಟಿ ಹೊಡೆಯುವುದೇ ಆಗಿದೆ. ಬಿಜೆಪಿಯಲ್ಲಿ ಲಂಚ ಲಂಚ ಲಂಚ ಎಂಬಂತಾಗಿದೆ. ಮೋದಿ ಏಳು ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ಇದರ ಬಗ್ಗೆ ಏಳು ಶಬ್ದವನ್ನೂ ಮಾತಾಡಿಲ್ಲ ಎಂದು ವ್ಯಂಗವಾಡಿದರು.
ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ ಬೆಳಗಾವಿಯಲ್ಲಿ 40 ಪರ್ಸೆಂಟ್ ಕೊಡಲಾಗದೇ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾವು ಅವರ ಕುಟುಂಬಕ್ಕೆ ಭೇಟಿ ಕೊಟ್ಟೆವು. ಬಿಜೆಪಿಗೆ ಸಹಾಯ ಮಾಡಿದ್ದು ನಮಗೆ ನಾಚಿಕೆ ತರಿಸಿದೆ ಎಂದು ಅವರ ಕುಟುಂಬಸ್ಥರು ನೋವು ತೋಡಿಕೊಂಡರು ಎಂದರು.
ಇದೇ ವೇಳೆ, ಪ್ರಣಾಳಿಕೆಯ ಮುಖ್ಯ ಭಾಗವಾಗಿರುವ ಕಾಂಗ್ರೆಸ್ ಗ್ಯಾರಂಟಿಯನ್ನು ಜನರಿಗೆ ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಗ್ಯಾರಂಟಿ ಕಾರ್ಡ್ ಪ್ರತಿ ಮನೆ ಮನೆಗೂ ವಿತರಿಸಿ. ಕಾರ್ಡ್ ಯಾರು ಇಟ್ಟುಕೊಂಡಿರುತ್ತಾರೋ ಅವರಿಗೆ ನಾವು ಅಧಿಕಾರಕ್ಕೆ ಬಂದ ಬಳಿಕ ಎರಡು ಸಾವಿರ ರೂಪಾಯಿ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಸ್ಥಳೀಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಪ್ರಸ್ತಾಪಿಸಿದ ಸುರ್ಜೆವಾಲಾ, ಸಿಎಂ ಸ್ಥಾನಕ್ಕೆ ಹಣ ನೀಡಬೇಕು ಎಂದು ಯತ್ನಾಳ್ ಹೇಳಿಕೆ ಸತ್ಯಾವಾಗಿದೆಯಾ? ಸತ್ಯವಾಗಿಲ್ಲ ಎಂದಾದರೆ ಯತ್ನಾಳ್ ವಿರುದ್ದ ಕ್ರಮ ಯಾಕೆ ಕೈಗೊಂಡಿಲ್ಲ ಎಂದ ಸುರ್ಜೆವಾಲಾ, ಕೈಗಾರಿಕಾ ಸಚಿವರು ಪಿಂಪ್ ಆಗಿದ್ದಾರೆ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ. ಹೈಕಮಾಂಡ್ ಇದರ ಬಗ್ಗೆ ಯಾಕೆ ಮಾತನಾಡೋದಿಲ್ಲ ಎಂದು ಪ್ರಶ್ನಿಸಿದರು. ಪಿಎಸ್ಐ ಹಗರಣ, ಬೆಲೆ ಏರಿಕೆ ಜನರನ್ನು ಹೈರಾಣು ಮಾಡಿದೆ. ಬಿಜೆಪಿ ನಾಯಕರಿಗೆ ನರಕದಲ್ಲೂ ಜಾಗ ಸಿಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಸಲೀಂ ಅಹಮದ್, ಶಿವಾನಂದ ಪಾಟೀಲ್ ಸೇರಿದಂತೆ ಹಲವು ನಾಯಕರು, ಟಿಕೆಟ್ ಆಕಾಂಕ್ಷಿಗಳು, ಕಾರ್ಯಕರ್ತರು ಭಾಗಿಯಾಗಿದ್ದರು.
ಇದನ್ನೂ ಓದಿ: ಈ ಬಜೆಟ್ಗೆ ಮಹತ್ವ ಇಲ್ಲ, ಮುಂದಿನ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ: ಹೆಚ್ಡಿಕೆ