ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಅಕ್ಕಮಹಾದೇವಿ ವಿವಿಯ ಖಾಲಿ ಇರುವ ಕುಲಪತಿ ಹುದ್ದೆಗೆ ಮೂವರು ಮಹಿಳಾ ಪ್ರಾಧ್ಯಾಪಕರ ಹೆಸರು ಅಂತಿಮಗೊಳಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಗೋಮತಿ, ಬಳ್ಳಾರಿ ವಿಶ್ವವಿದ್ಯಾಲಯದ ಪ್ರೊ. ತುಳಸಿ ಮಾಲಾ ಹಾಗೂ ಕಲಬುರ್ಗಿ ವಿವಿ ಪ್ರೊ. ಪುಪ್ಪಾ ಸವದತ್ತಿ ಅಂತಿಮ ರೇಸ್ ನಲ್ಲಿದ್ದು, ಈ ಮೂವರು ಮಹಿಳಾ ಮಣಿಗಳಲ್ಲಿ ಅಕ್ಕ ಮಹಾದೇವಿ ಮಹಿಳಾ ವಿವಿ ನೂತನ ಕುಲಪತಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.
ಕಳೆದ ಜೂ.19ರಂದು ಹಿಂದಿನ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ನಿವೃತ್ತರಾದ ಮೇಲೆ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಓಂಕಾರ ಕಾಕಡೆ ಹಂಗಾಮಿ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಅಧಿಕಾರಾವಧಿ ಇನ್ನೂ ಡಿ.13 ರವರೆಗೆ ಇದೆ.
ಈ ಹಿಂದೆ ನೂತನ ಕುಲಪತಿ ಹುದ್ದೆಗೆ ಆಗಸ್ಟ್ ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅ.14ರೊಳಗಾಗಿ ಅರ್ಜಿ ಸಲ್ಲಿಸಲು ಕೊನೆ ದಿನವಾಗಿತ್ತು. ಒಟ್ಟು 45 ಅರ್ಜಿಗಳು ಕುಲಪತಿ ಹುದ್ದೆಗೆ ಸಲ್ಲಿಸಲಾಗಿತ್ತು. ಇದರಲ್ಲಿ ಗುಲಬುರ್ಗಾ ವಿವಿ ಪ್ರೊ. ಪುಷ್ಪಾ ಸವದತ್ತಿ, ಪರಿಮಳಾ ಅಂಬೇಕರ್, ಪಾರ್ವತಿ, ಬಳ್ಳಾರಿ ವಿವಿ ತುಳಸಿಮಾಲಾ, ಮಹಿಳಾ ವಿವಿ ಕುಲಸಚಿವೆ ಪ್ರೊ. ಸುನಂದಮ್ಮ ಸೇರಿದಂತೆ ಕೆಲ ಪುರುಷ ಪ್ರಾಧ್ಯಾಪಕರು ಸಹ ಅರ್ಜಿ ಸಲ್ಲಿಸಿದ್ದರು.
ಹೀಗಾಗಿ ಮಹಿಳಾ ವಿವಿ ಕುಲಪತಿ ಹುದ್ದೆಗೆ ಪೈಪೋಟಿ ಜೊತೆ ಲಾಬಿಯೂ ಜೋರಾಗಿ ನಡೆದಿತ್ತು. ಸದ್ಯ ಹಂಗಾಮಿ ಕುಲಪತಿಗಳ ಅವಧಿ ಡಿ.13ರವರೆಗೆ ಇದೆ. ಅಷ್ಟರೊಳಗಾಗಿ ನೂತನ ಕುಲಪತಿಗಳ ನೇಮಕವಾಗಬೇಕಾಗಿದೆ.
ಕುಲಪತಿ ನೇಮಕ ಶೋಧನಾ ಸಮಿತಿ ಅಧ್ಯಕ್ಷರಾಗಿರುವ ಪ್ರೊ. ಸಿದ್ದೇಗೌಡ, ವಿಶ್ರಾಂತ ಕುಲಪತಿ ಡಾ.ಬಿ.ಜಿ. ಮೂಲಿಮನಿ, ಮಾಜಿ ಕುಲಪತಿ ಡಾ. ಮೀನಾ ಚಂದಾವರಕರ, ಪ್ರೊ. ಸುಷ್ಮಾ ಯಾದವ ಒಳಗೊಂಡ ಕುಲಪತಿ ನೇಮಕ ಶೋಧನಾ ಸಮಿತಿ ಪ್ರೊ. ಗೋಮತಿ, ಪ್ರೊ.ತುಳಸಿ ಮಾಲಾ ಹಾಗೂ ಪ್ರೊ. ಪುಷ್ಪಾ ಸವದತ್ತಿ ಅವರ ಹೆಸರನ್ನು ಅಂತಿಮ ಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿದ್ದು, ರಾಜ್ಯಪಾಲರು ಯಾವ ಹೆಸರು ಅಂತಿಮ ಗೊಳಿಸುತ್ತಾರೆ ಎನ್ನುವ ಕುತೂಹಲ ಉನ್ನತ ಶಿಕ್ಷಣ ವಲಯದಲ್ಲಿ ಮೂಡಿದೆ.