ವಿಜಯಪುರ: ಕಳ್ಳತನಕ್ಕಾಗಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಅಡುಗೆ ಮನೆಯಲ್ಲಿದ್ದ ಊಟವನ್ನು ಭರ್ಜರಿಯಾಗಿ ತಿಂದು 13ಸಾವಿರ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಕಂಡು ಬಂದಿದೆ.
ರತ್ನಾಪುರ ಗ್ರಾಮದ ಶಿವಾಜಿ ಕೃಷ್ಣಪ್ಪ ಹರಗೆ ಎಂಬವರ ಮನೆಗೆ ಕಳೆದ ರಾತ್ರಿ ನುಗ್ಗಿದ ಖದೀಮರು ಹಣ ಕದಿಯುವ ಮುನ್ನ ಮನೆಯಲ್ಲಿ ಇಟ್ಟಿದ್ದ ರೂಟ್ಟಿ, ಸಾಂಬಾರ್, ಕಾಯಿಪಲ್ಲೆ ಹಾಗೂ ಅನ್ನ ತಿಂದು ನಂತರ ಮನೆ ಮಾಲೀಕನ ಜೇಬಿನಲ್ಲಿಟ್ಟಿದ್ದ 13 ಸಾವಿರ ರೂ. ನಗದನ್ನು ಕದ್ದು ಪರಾರಿಯಾಗಿದ್ದಾರೆ.
ಬೆಳಗ್ಗೆ ಮಾಲೀಕ ಅಡುಗೆ ಮನೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಕಿಟಕಿ ಮೂಲಕ ಮನೆಗೆ ನುಗ್ಗಿದ ಕಳ್ಳರು ಅಡುಗೆ ಕೋಣೆಯಲ್ಲಿದ್ದ ರೊಟ್ಟಿ - ಸಾಂಬಾರ್ ಊಟ ಮಾಡಿ ಬಳಿಕ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಹುಡುಕಿದ್ದಾರೆ. ನಂತರ ಪಕ್ಕದಲ್ಲೇ ಇದ್ದ ಪ್ಯಾಂಟ್ ಜೇಬಿನಿಂದ 13 ಸಾವಿರ ಹಣ ಎತ್ತಿಕೊಂಡು ಕಾಲ್ಕಿತ್ತಿದ್ದಾರೆ.
ಇನ್ನು ಈ ಕುರಿತು ತಿಕೋಟಾ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.