ಮುದ್ದೇಬಿಹಾಳ (ವಿಜಯಪುರ): ತಾಲೂಕಿನಲ್ಲಿ 76,977 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದು, 73,457 ನೆಗಟಿವ್ ಕೇಸ್ ಬಂದಿವೆ ಎಂದು ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮುದ್ದೇಬಿಹಾಳ ತಾಲೂಕಿನಲ್ಲಿ ಈವರೆಗೆ ಪಾಸಿಟಿವ್ ಕೇಸ್‌ಗಳ ಸಂಖ್ಯೆ 3,530 ದಾಖಲಾಗಿದ್ದು, ಅದರಲ್ಲಿ 3,043 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ತಾಲೂಕಿನಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.
ಇಂದು ಮತ್ತೆ 27 ಹೊಸ ಕೇಸ್ ಬಂದಿವೆ. ಯಾರಿಗೆ ಲಕ್ಷಣಗಳಿಲ್ಲವೋ ಅಂಥವರಿಗೆ ಹೋಂ ಐಸೋಲೆಷನ್‌ಗೆ ಸೂಚಿಸಿದ್ದು, 387 ಜನ ಹೋಂ ಐಸೋಲೆಷನ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 17 ಮಂದಿ ಈ 2ನೇ ಅಲೆಯಲ್ಲಿ ಮರಣ ಹೊಂದಿದ್ದಾರೆ ಎಂದು ತಿಳಿಸಿದರು.
ಕಂಟೋನ್ಮೆಂಟ್ ಝೋನ್‌ಗಳು ಹೆಚ್ಚಾಗಿ ಮಾಡಿಲ್ಲ. ಒಂದೇ ಕಡೆ ಐದಾರು ಕೇಸ್ ಬಂದರೆ ಆ ಸ್ಥಳವನ್ನು ಮಿನಿ ಕಂಟೋನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ತಾಲೂಕಿನಲ್ಲಿ 4 ಕಡೆ ಮಿನಿ ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ.
ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್‌ಗಾಗಿ 28 ಬೆಡ್‌ಗಳು ಇದ್ದು ಅದರಲ್ಲಿ 20 ಆಕ್ಸಿಜನ್ ಬೆಡ್ ಇವೆ. ಮೂರು ವೆಂಟಿಲೇಟರ್ ಬೆಡ್ ಇದ್ದು ತಾಲೂಕು ಆಸ್ಪತ್ರೆತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆಗೆ ಹೋಗಿರುವ 10 ರೋಗಿಗಳನ್ನು ಉಳಿಸಿದ್ದೇವೆ ಎಂದು ವೈದ್ಯರು ಮಾಹಿತಿ ನೀಡಿದ್ದು ಇಲ್ಲಿನ ವೈದ್ಯರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಕೊರೊನಾ ಸೋಂಕಿತರಿಗೆ ಬೇಕಾದ ಆಕ್ಸಿಜನ್ ಪೂರೈಸಲು 72 ಜಂಬೋ ಸಿಲಿಂಡರ್‌ಗಳಿದ್ದು, ಅದರಲ್ಲಿ 30 ಸಿಲಿಂಡರ್‌ಗಳು ಇನ್ನು ಪೂರೈಕೆಯಾಗಬೇಕು. ಪ್ರತಿದಿನ 20-30 ಬಳಕೆ ಮಾಡಲಾಗುತ್ತಿದೆ. ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. 5 ಆ್ಯಂಬುಲೆನ್ಸ್ಗಳನ್ನು ಕೋವಿಡ್‌ಗೋಸ್ಕರ ಮೀಸಲಾಗಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳಿಗೆ ಸಚಿವೆ ತರಾಟೆ
ಅಂಗನವಾಡಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಮೊಟ್ಟೆ, ಆಹಾರ ಧಾನ್ಯ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂಬ ಆರೋಪ ಹಿನ್ನೆಲೆ ಶಶಿಕಲಾ ಜೊಲ್ಲೆ ಇಲಾಖೆಯ ಉಪನಿರ್ದೇಶಕ, ಸಿಡಿಪಿಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚವ್ಹಾಣ್, ಸಿಡಿಪಿಓ ಸಾವಿತ್ರಿ ಗುಗ್ಗರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಅವಧಿಯಲ್ಲಿ ಸರಿಯಾಗಿ ಕೆಲಸ ಮಾಡಿದ್ದೀರಿ ಎಂದು ಒಳ್ಳೆಯ ಹೆಸರು ತೆಗೆದುಕೊಂಡು ಈಗೇಕೆ ಹೀಗೆ ಮಾಡುತ್ತಿದ್ದೀರಿ. ಇಲ್ಲಿ ನಾವೆಲ್ಲ ಏನು ಮಾಡುತ್ತಿದ್ದೇವೆ ಎಂಬುದರ ಅರಿವು ನಿಮಗಿದೆಯೇ ಎಂದು ಹರಿಹಾಯ್ದರಲ್ಲದೇ, ಸರಿಯಾಗಿ ಕೆಲಸ ಮಾಡದಿದ್ದರೆ ಇಬ್ಬರೂ ಸಸ್ಪೆಂಡ್ ಆಗ್ತೀರಿ ಎಂದು ಎಚ್ಚರಿಸಿದರು.