ವಿಜಯಪುರ: ದೇಶದ ಸಂವಿಧಾನ ರಚನೆಯಾದ ದಿನದಿಂದಲೂ ಸಂಘ ಪರಿವಾರ ವಿರೋಧಿಸುತ್ತಲೇ ಬಂದಿದೆ. ಸಂವಿಧಾನ ರದ್ದು ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತು ಪರೋಕ್ಷವಾಗಿ ಅದನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು.
ನಗರದ ಹೊರವಲಯದಲ್ಲಿ ವಿಜಯಪುರ ಜಂಟಿ ಕಮಿಟಿ ಆಯೋಜಿಸಿದ್ದ ಸಂವಿಧಾನ ಉಳಿಸಿ ಜನಾಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನ ರದ್ದುಗೊಳಿಸಲು ಕೇಂದ್ರ ಸರ್ಕಾರ ಮುಂದಾದರೆ ದೇಶದಲ್ಲಿ ರಕ್ತ ಕ್ರಾಂತಿ ಆಗುತ್ತದೆ ಎಂದು ಅರಿತು ಸಿಎಎ, ಎನ್ ಆರ್ ಸಿ ಹಾಗೂ ಎನ್ಪಿಆರ್ ತರುವ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸಲು ಹೊರಟಿದೆ. ಇದಕ್ಕೆ ನಾವು ಜಗ್ಗಬಾರದು ನಮ್ಮ ಹೋರಾಟವನ್ನು ಮುಂದುವರೆಸಬೇಕು ಎಂದು ಗುಡುಗಿದರು.
ಪೌರತ್ವ ಕಾಯ್ದೆ ವಿರೋಧಿಸಿ ದೇಶಾದಾದ್ಯಂತ ಜನಾಂದೋಲನ ಹೆಚ್ಚಾಗುತ್ತಿರುವುದು ನೋಡಿದರೆ ದೇಶದಲ್ಲಿ ಮತ್ತೊಂದು ಸ್ವತಂತ್ರ ಹೋರಾಟ ಆರಂಭವಾಗಿದೆ. ಕೇಂದ್ರ ಸರ್ಕಾರ ಈ ಕಾಯ್ದೆ ಹಿಂದಕ್ಕೆ ತೆಗೆದುಕೊಳ್ಳುವವರೆಗೂ ಹೋರಾಟ ಮುಂದುವರೆಸಬೇಕು ಎಂದರು.
ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಪೌರತ್ವ ಕಾಯ್ದೆಯನ್ನು ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರಲು ಹೊರಟಿದ್ದಾರೆ. ಈ ರೀತಿ ಜನಾಂದೋಲನ ಆಯೋಜಿಸುವ ಮೂಲಕ ಕೇಂದ್ರಕ್ಕೆ ಬಿಸಿ ಮುಟ್ಟಿಸಬೇಕು ಎಂದರು.