ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಸೇರಿ ಇಬ್ಬರು ಮಾಜಿ ಸಚಿವರಿಗೆ ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಚಿನ್ನದ ಕಿರೀಟ ತೊಡಿಸಿದ ಪ್ರಸಂಗ ನಡೆಯಿತು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಅವರಿಗೆ ಕಾರಜೋಳ ಗ್ರಾಮಸ್ಥರು 210 ಗ್ರಾಂನ ಮೂರು ಚಿನ್ನದ ಕಿರೀಟ ತೊಡಿಸಲು ಮುಂದಾಗಿದ್ದರು. ಆದರೆ, ಮೂವರು ಸಹ ಕಿರೀಟ ತೊಡಿಸಿಕೊಳ್ಳಲು ನಿರಾಕರಿಸಿದರು.
ಕೋವಿಡ್ನಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಚಿನ್ನದ ಕಿರೀಟ ಬೇಡ ಎಂದು ಎಷ್ಟೇ ನಿರಾಕರಿಸಿದರೂ ಕೇಳದೆ ಗ್ರಾಮಸ್ಥರು ಒತ್ತಾಯವಾಗಿ ಗೋವಿಂದ ಕಾರಜೋಳ ಹಾಗೂ ಎಂ.ಬಿ. ಪಾಟೀಲ ಅವರಿಗೆ ಕಿರೀಟ ಹಾಕಿದರು. ಶಿವಾನಂದ ಪಾಟೀಲ ಎಷ್ಟೇ ನಿರಾಕರಿಸಿದರೂ ಒತ್ತಾಯವಾಗಿ ಕಿರೀಟ ತೊಡಿಸಿಯೇ ಬಿಟ್ಟರು. ಇದರಿಂದ ಕಸಿವಿಸಿಗೊಂಡ ಶಿವಾನಂದ ಪಾಟೀಲ ಕೋಪದಿಂದಲೇ ವೇದಿಕೆಯಿಂದ ಕೆಳಗೆ ಇಳಿದು ಹೋದರು.