ವಿಜಯಪುರ/ಮುದ್ದೇಬಿಹಾಳ: ಕೊರೊನಾ ವೈರಸ್ನಿಂದಾಗಿ ತಾಲೂಕಿನಲ್ಲಿ ಅಲೆಮಾರಿ ಜನಾಂಗದ ಹತ್ತಕ್ಕೂ ಹೆಚ್ಚು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ.
ಇಲ್ಲಿನ ಘಾಳಪೂಜಿಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಸೇರಿ ಅಂದಾಜು ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಊಟವಿಲ್ಲದೇ ಪರದಾಡುವ ದುಃಸ್ಥಿತಿ ಎದುರಾಗಿದೆ. ಹಳ್ಳಿ ಹಳ್ಳಿಗಳಲ್ಲಿ ದುರಗಮುರಗಿ ಆಟ, ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುವ ಇವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಚಿಕ್ಕಪುಟ್ಟ ಮಕ್ಕಳಿಗೆ ಆಹಾರ ಕೊಡಲಾಗದೇ ಈ ಜನಾಂಗದವರು ದಿನವೂ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಬಿಜ್ಜೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಈ ಘಾಳಪೂಜಿ ಗ್ರಾಮದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿದ್ದಾರೆ. ತಾಲೂಕು ಆಡಳಿತದಿಂದ ನಮಗೆ ಆಹಾರಧಾನ್ಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಅಲೆಮಾರಿ ಜನಾಂಗದವರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.