ವಿಜಯಪುರ : ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಜತೆಗೆ ಸೂಕ್ತ ಸಿಬ್ಬಂದಿಯೂ ಅತ್ಯವಶ್ಯಕ. ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವರೇ ಹೆಚ್ಚು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳಿರುವುದಿಲ್ಲ ಅನ್ನೋರಿಗೆ ವಿಜಯಪುರ ಜಿಲ್ಲಾಸ್ಪತ್ರೆ ಉತ್ತಮ ಚಿಕಿತ್ಸೆ ಕೊಡುವುದರ ಮೂಲಕ ಮಾದರಿಯಾಗಿದೆ.
ಸಣ್ಣ ಚಿಕಿತ್ಸೆಯಿಂದ ಹಿಡಿದು ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿದೆ. ಮೂಲಸೌಲಭ್ಯ ಹೊಂದುವುದರ ಜತೆಗೆ ಸ್ವಚ್ಛತೆಗೆ ಸತತ ಮೂರು ಬಾರಿ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊಂಚ ಮಟ್ಟಿನ ಸಿಬ್ಬಂದಿ ಕೊರತೆ ಹೊರತುಪಡಿಸಿದರೆ ಚಿಕಿತ್ಸೆಗೆ ಪೂರಕ ವಾತಾವರಣ ಇಲ್ಲಿದೆ.
ವಿಜಯಪುರ ನಗರದ ಹೊರವಲಯದಲ್ಲಿರುವ ಬೃಹತ್ ಕಟ್ಟಡದಲ್ಲಿ ಜಿಲ್ಲಾಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಒಂದು ವರ್ಷದ ಹಿಂದೆ ತಾಯಿ-ಮಗು ಆಸ್ಪತ್ರೆಯನ್ನು ಸಹ ಆರಂಭಿಸಲಾಗಿದೆ. ಏಕಕಾಲದಲ್ಲಿ ಒಟ್ಟು 60 ಗರ್ಭಿಣಿಯರು ಚಿಕಿತ್ಸೆಗೆ ದಾಖಲಾಗುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಿಂಗಳು 600-650 ಯಶಸ್ವಿ ಹೆರಿಗೆ ಮಾಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಉಲ್ಬಣಗೊಂಡ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಸೇರಿ ಹಲವಾರು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗೆ ಹಿಂದೇಟು ಹಾಕಿದ್ದಾಗ, ಆ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಯಶಸ್ವಿ ಚಿಕಿತ್ಸೆ ನಡೆಸಲಾಗಿದೆ. ಇದರ ಜತೆಗೆ ಪಿಡಿಯಾರ್ಡಿಕ್, ಆರ್ಥೋಪಿಡಿಕ್, ಸ್ಸೈನಲ್ ಹಿಪ್ಸೆ ಶಸ್ತ್ರ ಚಿಕಿತ್ಸೆಗಳನ್ನು ಸಹ ಯಶಸ್ವಿಯಾಗಿ ನಡೆಸಲಾಗಿದೆ.
ಜಿಲ್ಲಾಸ್ಪತ್ರೆ 300 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಇಲ್ಲಿಯೇ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೆಂಟರ್ಗಳು ಸಹ ಇರುವ ಕಾರಣ ರೋಗಿಗಳು ಸ್ಕ್ಯಾನಿಂಗ್ ಸಲುವಾಗಿ ಬೇರೆ ಆಸ್ಪತ್ರೆಗೆ ಅಲೆದಾಡುವ ಪ್ರಮೇಯ ಬರುವುದಿಲ್ಲ.
ಇದನ್ನೂ ಓದಿ: ದಾವಣಗೆರೆ: ಶಸ್ತ್ರ ಚಿಕಿತ್ಸೆ ಸೌಕರ್ಯ ಇದ್ದರೂ ಖಾಸಗಿ ಆಸ್ಪತ್ರೆಗೆ ಸರ್ಕಾರಿ ವೈದ್ಯರ ಶಿಫಾರಸು- ರೋಗಿಗಳ ಆರೋಪ
ಆದ್ರೆ, ವೈದ್ಯರು, ನರ್ಸ್ಗಳ ನೇಮಕಾತಿ ಕಡಿಮೆ ಪ್ರಮಾಣದಲ್ಲಿರುವ ಕಾರಣ ಕೆಲ ಬಾರಿ ಸಿಬ್ಬಂದಿಯಿಂದ ಎಡವಟ್ಟುಗಳು ನಡೆದಿರುವ ಉದಾಹರಣೆ ಸಹ ಇವೆ. ಇತ್ತೀಚೆಗೆ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿಯ ರಕ್ತ ಪರೀಕ್ಷೆ ವೇಳೆ ಸಿಬ್ಬಂದಿಯ ಅಚಾತುರ್ಯದಿಂದ ಎರಡು ಬಾರಿ ರಕ್ತದ ಮಾದರಿಯ ವರದಿ ಬೇರೆ-ಬೇರೆ ಬ್ಲಡ್ ಗ್ರೂಪ್ ಎಂದು ನೀಡಿ ಗೊಂದಲ ಸೃಷ್ಟಿಯಾಗಿತ್ತು.
ಜಿಲ್ಲಾಸ್ಪತ್ರೆಗೆ ಅಗತ್ಯ ಸಿಬ್ಬಂದಿಯ ನೇಮಕಾತಿಗೆ ಜಿಲ್ಲಾಡಳಿತ ಸಹ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಉಳಿದಂತೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಜಿಲ್ಲಾಸ್ಪತ್ರೆ ಯಶಸ್ವಿಯಾಗಿದೆ.