ವಿಜಯಪುರ: ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರನ್ನು ದುಷ್ಕರ್ಮಿಯೊಬ್ಬ ಭೀಕರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಇಂದು ನಡೆದಿದೆ. ದಿಲ್ಶಾದ್ ಹವಾಲ್ದಾರ್ (31) ಹತ್ಯೆಯಾದವರು. ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲಿ ಘಟನೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತ ಮಹಿಳೆಯ 18 ವರ್ಷದ ಮಗನ ಮೇಲೂ ಹರಿತ ಆಯುಧದಿಂದ ಹಲ್ಲೆ ನಡೆಸಲಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕಾಗಮಿಸಿದ ಇಂಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಐದು ದಶಕಗಳ ಭೀಮಾ ತೀರದ ರಕ್ತಸಿಕ್ತ ಚರಿತ್ರೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಎಡಿಜಿಪಿ ಅಲೋಕ್ ಕುಮಾರ್ ಶಾಂತಿ ಸುವ್ಯವಸ್ಥೆ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಶಿಕ್ಷಕಿಯ ಹತ್ಯೆ ನಡೆದಿದೆ.
ಅಪಘಾತದಲ್ಲಿ ಇಬ್ಬರು ಸಾವು: ಇನ್ನೊಂದೆಡೆ, ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಬಸ್ ಡಿಪೋ ಬಳಿ ನಡೆದಿದೆ. ಕೆಲಸ ಮುಗಿಸಿ ಒಂದೇ ಬೈಕ್ನಲ್ಲಿ ನಾಲ್ವರು ಮನೆಯತ್ತ ಹೋಗುತ್ತಿದ್ದಾಗ ಲಾರಿ ಗುದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಹೆಸರು ತಿಳಿದುಬಂದಿಲ್ಲ. ಬಸವನಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆ ಆರೋಪಿಗಳು ಸೆರೆ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಇಲ್ಲಿನ ಹಳೇ ಹುಬ್ಬಳ್ಳಿಯ ಸಂತೋಷ ನಗರದ ತಿಮ್ಮಸಾಗರ ಬಳಿ ಭಾನುವಾರ ನಡೆದ ನಾಗರಾಜ ಚಲವಾದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶಾನು ಮುಲ್ಲಾ, ಶಶಿ ಸುರಣಗಿ, ನಿಖಿಲ್ ಮೇದಾರ, ಪ್ರದೀಪ, ಗಿರೀಶ್ ಹಾಗೂ ಇನ್ನಿಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆ ನಡೆದಿದೆ.
ಹತ್ಯೆಯಾದ ನಾಗರಾಜನ ಸಹೋದರ ಬಸವರಾಜ ಚಲವಾದಿ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ನಂತರ ಆರೋಪಿಗಳಿಗೆ ಬಲೆಬೀಸಿದ್ದ ಪೊಲೀಸರು ಇಂದು ಬಂಧಿಸಿದ್ದಾರೆ. ಶಿವರಾತ್ರಿ ಅಂಗವಾಗಿ ಭಾನುವಾರ ಬೆಳಗ್ಗೆ 11.30ರ ವೇಳೆ ತಿಮ್ಮಸಾಗರದ ಈಶ್ವರ ದೇವಸ್ಥಾನದ ಬಳಿ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನಾಗರಾಜ ಪಾಲ್ಗೊಂಡಿದ್ದರು. ಈ ವೇಳೆ ಆರೋಪಿಗಳು ನಾಗರಾಜನ ಕಣ್ಣಿಗೆ ಖಾರದ ಪುಡಿ ಎರಚಿ, ತಲ್ವಾರ್, ಚಾಕು ಹಾಗೂ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ: ಭೀಮಾತೀರದ ರಕ್ತಸಿಕ್ತ ಅಧ್ಯಾಯ.. ಸಂಧಾನದ ಮೂಲಕ ಇತಿಶ್ರೀ ಹಾಡಿದ ಎಡಿಜಿಪಿ ಅಲೋಕ್ ಕುಮಾರ್