ವಿಜಯಪುರ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ದಿಸೆಯಲ್ಲಿ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಜಾಗೃತಿಯಿಂದ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಸೂಚಿಸಿದರು.
ಆಸ್ಪತ್ರೆಗಳಲ್ಲಿ ಬೆಡ್ಗಳ ಸಮರ್ಪಕ ನಿರ್ವಹಣೆ ಕುರಿತು ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಾ.ಧಾರವಾಡಕರ್ ಕೋವಿಡ್ ರೋಗಿಗಳಿಗೆ ಬೆಡ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಕೂಡಲೇ ಮಾಹಿತಿ ನೀಡುತ್ತಿದ್ದಾರೆ. ಸಾಧ್ಯವಾದಷ್ಟು ಎಲ್ಲ ರೋಗಿಗಳಿಗೆ ಬೆಡ್ ಸಿಗುವಂತೆ ಪ್ರಯತ್ನ ನಡೆಸಬೇಕು. ಈ ದಿಸೆಯಲ್ಲಿ ಜಿಲ್ಲೆಯ ಹಲವಾರು ಪ್ರತಿಷ್ಠಿತ ಆಸ್ಪತ್ರೆಗಳು ಕೂಡ ಉತ್ತಮ ಪ್ರತಿಕ್ರಿಯೆ ನೀಡುತ್ತಿವೆ ಎಂದು ಹೇಳಿದರು.
ಆಸ್ಪತ್ರೆಯವರು ಪ್ರತಿ 2 ಗಂಟೆಗೊಮ್ಮೆ ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಒಟ್ಟು ಬೆಡ್, ಸಾಮಾನ್ಯ ಬೆಡ್, ಐಸಿಯು ಬೆಡ್ ಕುರಿತು ಮಾಹಿತಿ ಒದಗಿಸುತ್ತಿರಬೇಕು. ಅಧಿಕಾರಿಗಳು ನಿಖರ ಮಾಹಿತಿ ಪಡೆದು ತಂತ್ರಾಂಶದಲ್ಲಿ ಅಪ್ಡೇಟ್ ಮಾಡಲು ಕ್ರಮ ವಹಿಸಬೇಕು. ಅವಶ್ಯವಿದ್ದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಆಸ್ಪತ್ರೆಗಳಿಗೆ ಅಧಿಕಾರಿಗಳು ಭೇಟಿ ನೀಡುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಶ್ರಮವಹಿಸುತ್ತಿದ್ದು, ಇದೇ ರೀತಿ ಮುಂದೆಯೂ ತಮ್ಮ ಕರ್ತವ್ಯಕ್ಕೆ ಚ್ಯುತಿ ಬರದಂತೆ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮಾತನಾಡಿ, ಜಿಲ್ಲೆಯಲ್ಲಿ ರೆಮ್ಡಿಸಿವರ್ ಔಷಧಿ ಎಲ್ಲ ರೋಗಿಗಳಿಗೆ ವಿತರಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ರೋಗಿಗಳಿಗೆ ಔಷಧಿ ಕಡಿಮೆಯಾಗದಂತೆ ಪ್ರಯತ್ನಿಸಲಾಗುತ್ತಿದೆ. ಅದೇ ರೀತಿ ಆಕ್ಸಿಜನ್ ಕೂಡ ಲಭ್ಯತೆ ಮೇಲೆ ರೋಗಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: 'ಸುಮಕ್ಕಾ ಎಲ್ಲಿದ್ದೀಯಕ್ಕಾ...' ಮಂಡ್ಯ ಕಡೆ ಮುಖಮಾಡದ ಸಂಸದೆ ವಿರುದ್ಧ ಆಕ್ರೋಶ