ವಿಜಯಪುರ: ಜಿಲ್ಲೆಯಲ್ಲಿ ಅಕ್ರಮವಾಗಿ ಕಾಲುವೆ ನೀರು ಬಳಸುತ್ತಿರುವ ರೈತರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಸೂಚಿಸಿದ್ದಾರೆ.
ಕಾಲುವೆಗಳಿಗೆ ನೀರು ಹರಿಸಿ ಹಲವು ದಿನಗಳು ಕಳೆದರೂ 70 ಕಿ.ಮೀ. ದಾಟಿ ಮುಂದೆ ಹೋಗದ ಕಾರಣ ಅರ್ಜುಣಗಿ ಮತ್ತು ಹೆಬ್ಬಾಳಟ್ಟಿ ಗ್ರಾಮದ ರೈತರು ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಗ್ರಾಮದ ಕಾಲುವೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ನಿನ್ನೆ ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ವೇಳೆ, ಶೇಗುಣಶಿ, ಕಂಬಾರಗಿ, ಸಂಗಾಪುರ ಹೆಚ್.ಎಸ್ ಗ್ರಾಮದ ರೈತರು ಅಕ್ರಮವಾಗಿ ಸೈಪಾನ್ ಮೂಲಕ ಕಾಲುವೆ ನೀರು ಬಳಕೆ ಮಾಡುತ್ತಿರುವುದು ಕಂಡು ಬಂತು.
ಇದರಿಂದ ಗರಂ ಆದ ಎಂ.ಬಿ.ಪಾಟೀಲ್, ಅಕ್ರಮ ನೀರು ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿದೇ ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಜಿಲ್ಲೆಯಲ್ಲಿ ಬರಗಾಲ ಹೋಗಲಾಡಿಸಲು 5 ವರ್ಷಗಳ ಕಾಲ ಹಗಲು-ರಾತ್ರಿ ಕೆಲಸ ಮಾಡಿ, ನೂರಾರು ಕಿ.ಮೀ. ಬೃಹತ್ ಜಾಕ್ವೆಲ್ಗಳಿಗೆ ನೀರು ಹರಿಸಿದ್ದೇವೆ. ನೀವು ಅಕ್ರಮವಾಗಿ ನೀರು ತೆಗೆದುಕೊಳ್ಳುವುದು ಸರಿಯೇ ಎಂದು ರೈತರನ್ನ ಪ್ರಶ್ನಿಸಿದರು. ಅಲ್ಲದೆ ಕಾಲುವೆ ಬಳಿ ಪೊಲೀಸರು ಗಸ್ತು ತಿರುಗಿ, ಅಕ್ರಮವಾಗಿ ನೀರು ಪಡೆಯುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಬಬಲೇಶ್ವರ ಪಿಎಸ್‌ಐಗೆ ಸೂಚಿಸಿದರು.