ವಿಜಯಪುರ: ಜಿಲ್ಲೆಯ ಕ್ರೀಡಾಪಟುಗಳ ಬಹುದಿನದ ಕನಸಾಗಿದ್ದ ಸಿಂಥೆಟಿಕ್ ಟ್ರ್ಯಾಕ್ ಕೊನೆಗೂ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ. ಎಲ್ಲ ರೀತಿಯ ಕ್ರೀಡೆಗಳ ಅಭ್ಯಾಸಕ್ಕಾಗಿ ಅರಂಭಗೊಳ್ಳಲಿರುವ ಈ ಟ್ರ್ಯಾಕ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ರಾಜ್ಯದ ಸೈಕ್ಲಿಂಗ್ ತವರೂರು ಎಂದು ಜಿಲ್ಲೆ ಗುರುತಿಸಲಾಗುತ್ತಿದೆ. ಸಾಕಷ್ಟು ಸೈಕ್ಲಿಸ್ಟ್ಗಳು ವಿಜಯಪುರದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿ ಕೊಂಡಿದ್ದಾರೆ. ಇದರ ಜತೆ ರಾಜೇಶ್ವರಿ ಗಾಯಕವಾಡ ಎಂಬ ಯುವತಿ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ದೇಶಕ್ಕಾಗಿ ಈಗಲೂ ಆಡುತ್ತಿದ್ದಾಳೆ. ಅವಳೂ ಸಹ ಇದೇ ವಿಜಯಪುರದವಳು. ಇದರ ಜತೆ ಬೇರೆ ಬೇರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಕ್ರೀಡಾಪಟುಗಳು ಶ್ರಮ ವಹಿಸುತ್ತಿದ್ದಾರೆ. ಅಂಥವರಿಗೆ ಉತ್ತೇಜನ ನೀಡಲು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿದೆ.
ನೂತನ ಜಿಲ್ಲಾಧಿಕಾರಿಗಳ ಮುತುವರ್ಜಿ: ರನ್ನಿಂಗ್, ಥ್ರೋಬಾಲ್ ಸೇರಿದಂತೆ ಒಳಾಂಗಣ ಕ್ರೀಡೆಗೆ ಅಭ್ಯಾಸ ಮಾಡಲು 10 ಕೋಟಿ ರೂ. ವೆಚ್ಚದಲ್ಲಿ ಈ ಟ್ರ್ಯಾಕ್ ನಿರ್ಮಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಈ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆದರೆ, ಪೂರ್ಣಗೊಂಡಿರಲಿಲ್ಲ. ಕೊನೆಗೂ ಕಾಮಗಾರಿ ಪೂರ್ಣಗೊಂಡಿದೆ. ಇನ್ನೇನು ಲೋಕಾಪರ್ಣೆಗೊಳ್ಳಲಿದೆ. ಈ ಬಗ್ಗೆ ಕ್ರೀಡಾಪಟುಗಳು ಸಹ ಸಂತಸ ಹಂಚಿಕೊಂಡಿದ್ದಾರೆ. ನಗರ ಶಾಸಕ ಹಾಗೂ ನೂತನ ಜಿಲ್ಲಾಧಿಕಾರಿಗಳ ಮುತುವರ್ಜಿ ಸಿಂಥೆಟಿಕ್ ಟ್ರ್ಯಾಕ್ ಪೂರ್ಣಗೊಳ್ಳಲು ಕಾರಣವಾಗಿದೆ ಎನ್ನುವುದು ಅವರ ಅನಿಸಿಕೆಯಾಗಿದೆ.
ಕೋಚ್ಗಳ ವೇತನ ಕನಿಷ್ಠ: ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿದೆ. ಆದರೆ, ಅನುದಾನದ ಕೊರತೆಯಿಂದ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೋಚ್ಗಳು ಮಾತ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಮುಖ್ಯವಾಗಿ ಕೋಚ್ಗಳಿಗೆ ನೀಡುವ ವೇತನ ಕನಿಷ್ಠ ಮಟ್ಟದ್ದಾಗಿದೆ. ಇಡೀ ದಿನ ಹೊಸ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೋಚ್ಗಳಿಗೂ, ಕೂಲಿ ಕಾರ್ಮಿಕರಿಗೂ ದೊರೆಯುವ ಸಂಬಳಕ್ಕಿಂತ ಕಡಿಮೆ ಸಂಬಳ ನೀಡಲಾಗುತ್ತಿದೆ ಎನ್ನುವ ಅಸಮಾಧಾನವಿದೆ. ಜಿಲ್ಲಾ ಕ್ರೀಡಾಂಗಣ ಸುತ್ತಮುತ್ತ ಮಳಿಗೆ ನಿರ್ಮಿಸಲಾಗಿದೆ. ಆದರೆ, ಬಾಡಿಗೆ ಸರಿಯಾಗಿ ಪಾವತಿಯಾಗುತ್ತಿಲ್ಲ. ಸರಿಯಾಗಿ ಬಾಡಿಗೆ ವಸೂಲಿ ಮಾಡಿ ಅದೇ ಹಣವನ್ನು ಕೋಚ್ ಸೇರಿದಂತೆ ವಿವಿಧ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ನೀಡಬೇಕು ಎನ್ನುವ ಬೇಡಿಕೆ ಇತ್ತು. ಅದನ್ನು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಬಗೆಹರಿಸಿ ಕೋಚ್ಗಳಿಗೆ ಕನಿಷ್ಠ ವೇತನ ನೀಡುವ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯ ಕ್ರೀಡಾಪಟುಗಳಿಗಾಗಿ ಕೊನೆಗೂ ಸಿಂಥೆಟಿಕ್ ಟ್ರ್ಯಾಕ್ ಪೂರ್ಣಗೊಂಡಿದೆ. ಈ ಟ್ರ್ಯಾಕ್ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಜನ ಸೇವಾ ಮತ್ರು ಕ್ರೀಡಾ ಇಲಾಖೆಯ ಮೇಲಿದೆ. ಅನಾವಶ್ಯಕವಾಗಿ ಹೊರಗಿನ ಜನರನ್ನು ಟ್ರ್ಯಾಕ್ ನಲ್ಲಿ ಅಡ್ಡಾಡಲು ಬಿಡದಂತೆ ನೋಡಿಕೊಂಡು ಕ್ರೀಡಾಪಟುಗಳಿಗೆ ಮಾತ್ರ ಮೀಸಲಿಡಬೇಕಾಗಿದೆ.