ಮುದ್ದೇಬಿಹಾಳ : ಭಾರಿ ಮಳೆಯಿಂದ ಮನೆಗಳು ಬಿದ್ದು ಸಂಕಷ್ಟದಲ್ಲಿರುವ ಗ್ರಾಮೀಣ ಭಾಗದ ಜನರ ನೆರವಿಗೆ ಜಿಲ್ಲಾಡಳಿತ ಧಾವಿಸಿದೆ.
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹಾಗೂ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಆದೇಶದ ಮೇರೆಗೆ ಮಳೆಯಿಂದ ಬಿದ್ದಿರುವ ಮನೆಗಳ ಸಮೀಕ್ಷೆಯನ್ನು ನಾಲ್ಕು ಇಲಾಖೆಗಳ ಅಧಿಕಾರಿಗಳ ತಂಡದಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮತಕ್ಷೇತ್ರ ವ್ಯಾಪ್ತಿಯ ಯರಝರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಾದ ಯಲಗೂರ,ಕಾಶಿನಕುಂಟಿ,ಬೂದಿಹಾಳ ಪಿ.ಎನ್.,ಮಸೂತಿ, ವಡವಡಗಿ, ಬಳಬಟ್ಟಿ ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೂ ಭೇಟಿ ನೀಡಿದ ಅಧಿಕಾರಿಗಳ ತಂಡ ಮಾಹಿತಿ ಸಂಗ್ರಹಿಸಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಡಬ್ಲ್ಯುಡಿ ಜೆಇ ಸೋಮನಾಥ ಕೊಳಗೇರಿ, ತಾಲೂಕು ಆಡಳಿತದ ನಿರ್ದೇಶನದಂತೆ ಮನೆಗಳು ಬಿದ್ದಿರುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮನೆ ಬಿದ್ದಿರುವ ಪ್ರಮಾಣ ಎಷ್ಟು, ಕಚ್ಚಾ,ಪಕ್ಕಾ ಮನೆ ಎಂಬುದನ್ನು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ಜೂಲಗುಡ್ಡ,ಪಿಡಿಒ ಮಹಾಂತೇಶ ಹೊಸಗೌಡರ,ಪಿಆರ್‌ಇಡಿ ಜೆಇ ವಿಜಯಕುಮಾರ ಗ್ರಾಮಗಳಲ್ಲಿ ಸಂಚರಿಸಿ ಬಿದ್ದಿರುವ ಮನೆಗಳ ಮಾಹಿತಿ ಪಡೆದುಕೊಂಡರು.