ವಿಜಯಪುರ: ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ನಗರದ ಜನತೆಗೆ ಇಂದು ಸಂಜೆ ಸುರಿದ ಮಳೆ ತಂಪೆರೆದಿದೆ.
ಸಂಜೆ ಗುಡುಗು ಸಮೇತ ಭಾರಿ ಮಳೆ ಆರಂಭವಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆ ನಡುವೆ ಬಿದ್ದ ಆಲಿಕಲ್ಲು ಮಳೆಯ ವೇಗವನ್ನು ಮತ್ತಷ್ಟು ಹೆಚ್ಚಿಸಿತು. ಭಾರಿ ಮಳೆ-ಗಾಳಿಯಿಂದಾಗಿ ನಗರದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿತ್ತು.
ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ದಾಟಿತ್ತು. ಹವಾಮಾನ ಇಲಾಖೆ ಒಂದು ವಾರದಲ್ಲಿ ಮಳೆಯಾಗಬಹುದೆಂದು ಮುನ್ನೆಚ್ಚರಿಕೆ ನೀಡಿತ್ತು. ಅದರಂತೆ ಇಂದು ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ.
ರೈತ ಕಂಗಾಲು:
ಪ್ರತಿವರ್ಷ ಒಂದಿಲ್ಲೊಂದು ಕಾರಣಕ್ಕೆ ಬೆಳೆ ನಷ್ಟ ಅನುಭವಿಸುತ್ತಿರುವ ಅನ್ನದಾತ, ಇಂದು ಸುರಿದ ಅಕಾಲಿಕ ಮಳೆಗೆ ಮತ್ತೆ ನಷ್ಟ ಅನುಭವಿಸಿದ್ದಾನೆ. ಕೈಗೆ ಬಂದ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ ,ದಾಳಿಂಬೆ, ಚಿಕ್ಕು ಹಾಳಾಗಿದ್ದು ಮತ್ತೆ ರೈತ ಸಂಕಷ್ಟಕ್ಜೆ ಸಿಲುಕಿದ್ದಾನೆ.