ವಿಜಯಪುರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಆಹಾರ ಧಾನ್ಯ, ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಮಕ್ಕಳು ಶಾಲೆಗೆ ಹೋಗಲು ಹೆದರುವಂತಾಗಿದೆ.
ಮಳೆ ಬಂದ್ರೆ ಸಾಕು ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ಹಳ್ಳ ತುಂಬಿ ಹರಿಯುತ್ತದೆ. ಜೀವ ಕೈಯಲ್ಲಿ ಹಿಡಿದು ಮಕ್ಕಳು ಶಾಲೆಗೆ ಹೋಗಬೇಕು. ಹೀಗಾಗಿ, ಮಳೆಗಾಲ ಬಂದರೆ ಸಾಕು ಇಲ್ಲಿನ ಶಾಲಾ ಮಕ್ಕಳಿಗೆ ಅಘೋಷಿತ ರಜೆ ಗ್ಯಾರಂಟಿ.
ಇದನ್ನೂ ಓದಿ: ಮಳೆ ನಿಂತು ಹೋದರೂ ಕಲಘಟಗಿ ಜನರಿಗೆ ತಪ್ಪದ ಫಜೀತಿ.. ಸೇತುವೆ ಇಲ್ಲದೆ ಸಂಚಾರ ದುಸ್ತರ
ಅಲಿಯಾಬಾದ್ ಹೊರಭಾಗದ ಹಳ್ಳದ ಆಚೆಗಿನ ಜಮೀನಿನಲ್ಲಿ 30ಕ್ಕೂ ಅಧಿಕ ಮನೆಗಳಿವೆ. ವಸತಿ ಮನೆಯವರೆಲ್ಲ ನಿತ್ಯ ಗ್ರಾಮಕ್ಕೆ ಆಗಮಿಸಬೇಕೆಂದರೆ ಈ ಹಳ್ಳವನ್ನು ದಾಟಿ ಬರಬೇಕು. ವಸತಿ ಮನೆಗಳಲ್ಲಿ ಸುಮಾರು 50 ವಿದ್ಯಾರ್ಥಿಗಳಿದ್ದು ಇವರಿಗೆ ಮಳೆಗಾಲದಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಕಡಿಮೆ ನೀರಿದ್ದಾಗ ವಿದ್ಯಾರ್ಥಿಗಳು ಕೈ ಕೈ ಹಿಡಿದುಕೊಂಡು ಹಳ್ಳ ದಾಟುತ್ತಾರೆ. ಹೆಚ್ಚು ನೀರಿದ್ದಾಗ ಪೋಷಕರು ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೊಳೆ ದಾಟಿಸಿ ಬರುವುದು ಹಾಗೂ ಸಂಜೆ ಶಾಲೆ ಬಿಟ್ಟ ಬಳಿಕ ಮತ್ತೆ ವಾಪಸ್ ಕರೆದುಕೊಂಡು ಹೋಗುವುದು ಇಲ್ಲಿ ರೂಢಿಯಾಗಿದೆ.
ಮಳೆಗಾಲದಲ್ಲಿ ಮಳೆ ನೀರು ಬಂದು ಸಮಸ್ಯೆಯಾದರೆ ಇನ್ನುಳಿದ ದಿನಗಳಲ್ಲಿ ಇದೇ ಹಳ್ಳಕ್ಕೆ ಕಾಲುವೆ ನೀರನ್ನು ಹರಿಸಲಾಗುತ್ತದೆ. ಕೆರೆಗಳನ್ನು ಭರ್ತಿ ಮಾಡಲು ಕಾಲುವೆ ನೀರನ್ನು ಹಳ್ಳಕ್ಕೆ ಬಿಡುತ್ತಾರೆ. ಯಾವಾಗಲೂ ಹಳ್ಳ ತುಂಬಿರುವುದರಿಂದ ಕೂಡಲೇ ಸೇತುವೆ ನಿರ್ಮಾಣ ಮಾಡಬೇಕು, ಸ್ಥಳೀಯ ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಯಾರಿಗೂ ಬೇಡ ಈ ಗ್ರಾಮಸ್ಥರ ಯಾತನೆ: ಹಳ್ಳದ ನೀರಲ್ಲಿ ನಿತ್ಯ ಸರ್ಕಸ್, ಮನ ಕಲಕುವಂತಿದೆ ವಿದ್ಯಾರ್ಥಿನಿಯ ಮನವಿ