ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆವಾಜ್ಗೆ ಕೊನೆಗೂ ರಾಜ್ಯ ಸರಕಾರ ಮಣಿದಿದ್ದು, ವಿಜಯಪುರ ಮಹಾನಗರ ಪಾಲಿಕೆಗೆ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅದೇ ಪಕ್ಷದ ಶಾಸಕ ಯತ್ನಾಳ್ ಹರಿಹಾಯ್ದು, ಮುಖ್ಯಮಂತ್ರಿ ಬದಲಾಗ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಇದೀಗ ತಮ್ಮ ಜನಪರ ಧ್ವನಿಗೆ ಸರಕಾರ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ನಿನ್ನೆಯಷ್ಟೇ ವಿಜಯಪುರದಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ವಿಜಯಪುರ ನಗರ ಯೋಜನೆವೊಂದಕ್ಕೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಈ ಕುರಿತು ಸರಕಾರದ ಆದೇಶ ಪ್ರತಿ ಈ ಟಿವಿ ಭಾರತ್ಗೆ ಲಭ್ಯವಾಗಿದೆ.
ರಾಜ್ಯ ಸರ್ಕಾರ ರಾಜ್ಯದಲ್ಲಿರುವ 10 ಮಹಾನಗರ ಪಾಲಿಕೆಗಳಿಗೆ ಹಣ ಬಿಡುಗಡೆ ಮಾಡಿದ್ದು, ವಿಜಯಪುರ ಮಹಾನಗರ ಪಾಲಿಕೆಗೆ ಹಣ ಬಿಡುಗಡೆ ಯಾಗಿರುವುದನ್ನ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಖಚಿತ ಪಡಿಸಿದ್ದಾರೆ. ನಾವು ಗಟ್ಟಿಯಾಗಿ ಕೇಳದಿದ್ದರೆ ಸರ್ಕಾರ ಹಣ ಬಿಡುಗಡೆ ಮಾಡುವುದಿಲ್ಲ ಎಂದಿದ್ದ ಯತ್ನಾಳ್, ನೇರವಾಗಿ ತಮ್ಮ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಕೊನೆಗೂ ಬಿಜೆಪಿ ಶಾಸಕರ ಖಡಕ್ ಹೇಳಿಕೆಗೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಹಣ ಬಿಡುಗಡೆ ಮಾಡಿದೆ.