ಹೈದರಾಬಾದ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ನಲ್ಲಿರುವ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಬಾಹ್ಯಾಕಾಶಯಾನಿ 2024 ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮತ ಚಲಾಯಿಸಲಿದ್ದಾರೆ. ಭಾರತೀಯ ಮೂಲದ ಬಾಹ್ಯಾಕಾಶ ಸುನಿತಾ ವಿಲಿಯಮ್ಸ್ ಮತ್ತು ಅವರ ಬೋಯಿಂಗ್ ಸ್ಟಾರ್‌ಲೈನರ್ ಪಾಲುದಾರ ಬುಚ್ ವಿಲ್ಮೋರ್ ಫೆಬ್ರವರಿ ವರೆಗೆ ಬಾಹ್ಯಾಕಾಶದಲ್ಲೇ ಇರಲಿದ್ದಾರೆ. ಬಾಹ್ಯಾಕಾಶ ನೌಕೆಯಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಅವರು ಮುಂದಿನ ಫೆಬ್ರವರಿವರೆಗೂ ಅಲ್ಲೇ ಇರಬೇಕಾಗಿದೆ.
ಬಾಹ್ಯಾಕಾಶದಿಂದ ಮತದಾನ - ಹೀಗೆ ನಡೆಯಲಿದೆ ಪ್ರಕ್ರಿಯೆ: ನಾಸಾ ಗಗನಯಾತ್ರಿಗಳಿಗೆ ಬಾಹ್ಯಾಕಾಶದಿಂದ ಮತ ಚಲಾಯಿಸಲು ಅನುವು ಮಾಡಿಕೊಡಲಾಗುತ್ತಿದೆ. ಅವರು ಮತದಾನ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದ ಕಾರಣ, ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ತಮ್ಮ ಮತ ಚಲಾಯಿಸಲಿದ್ದಾರೆ. ಈ ಮತಪತ್ರವು ನಿಲ್ದಾಣದಿಂದ ಟೆಕ್ಸಾಸ್‌ನಲ್ಲಿರುವ ನಾಸಾದ ಮಿಷನ್ ಕಂಟ್ರೋಲ್ ಸೆಂಟರ್‌ಗೆ 1.2 ಮಿಲಿಯನ್ ಮೈಲುಗಳಷ್ಟು ದೂರದಿಂದ ಸುರಕ್ಷಿತವಾಗಿ ರವಾನೆಯಾಗುತ್ತದೆ.
ಗಗನಯಾತ್ರಿಗಳು ಗೈರುಹಾಜರಿ ಬಗ್ಗೆ ಫೆಡರಲ್ ಪೋಸ್ಟ್ ಕಾರ್ಡ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತಾರೆ. ನಂತರ ಎಲೆಕ್ಟ್ರಾನಿಕ್ ಮತಪತ್ರವನ್ನು ಭರ್ತಿ ಮಾಡುತ್ತಾರೆ, ಇದನ್ನು NASA ದ ಟ್ರ್ಯಾಕಿಂಗ್ ಮತ್ತು ಡೇಟಾ ರಿಲೇ ಉಪಗ್ರಹ ವ್ಯವಸ್ಥೆಯ ಮೂಲಕ ನ್ಯೂ ಮೆಕ್ಸಿಕೋದ ಆಂಟೆನಾಗೆ ಕಳುಹಿಸಲಾಗುತ್ತದೆ.
ಮುಂದೆ NASA ಮತಪತ್ರವನ್ನು ಮಿಷನ್ ಕಂಟ್ರೋಲ್‌ಗೆ ಪ್ರಸಾರ ಮಾಡುತ್ತದೆ, ನಂತರ ಅದನ್ನು ಗಗನಯಾತ್ರಿಗಳ ಸ್ಥಳೀಯ ಕೌಂಟಿ ಕ್ಲರ್ಕ್‌ಗೆ ಕಳುಹಿಸುತ್ತದೆ. ಆಗ ಅವರು ಅಧಿಕೃತವಾಗಿ ಮತ ಚಲಾಯಿಸುತ್ತಾರೆ. ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತಪತ್ರವನ್ನು ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ ಮತ್ತು ಗಗನಯಾತ್ರಿ ಮತ್ತು ಅದನ್ನು ನಿರ್ವಹಿಸುವ ಗುಮಾಸ್ತರು ಮಾತ್ರವೇ ಈ ಮತವನ್ನು ವೀಕ್ಷಿಸಬಹುದಾಗಿದೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸಂತಸ : ಸುನೀತಾ ವಿಲಿಯಮ್ಸ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ವಾಪಸಾಗಬೇಕಿತ್ತು. ಆದರೆ ಸುರಕ್ಷತಾ ಪ್ರೋಟೋಕಾಲ್‌ಗಳ ಕಾರಣದಿಂದಾಗಿ ಜೂನ್ 2024 ರಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಿದಾಗಿನಿಂದ, ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕನಿಷ್ಠ ಫೆಬ್ರವರಿ 2025 ರವರೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಗಿದೆ. ಸೆಪ್ಟೆಂಬರ್‌ನಲ್ಲಿ ಇಬ್ಬರೂ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಅಮೆರಿಕದ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು.
ವಿಲಿಯಮ್ಸ್ ಅವರು ಬಾಹ್ಯಾಕಾಶದಿಂದ ಮತದಾನ ಮಾಡುವ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. "ಇದು ನಾಗರಿಕರಾಗಿ ನಾವು ಹೊಂದಿರುವ ಪ್ರಮುಖ ಕರ್ತವ್ಯವಾಗಿದೆ. ನಾನು ಬಾಹ್ಯಾಕಾಶದಿಂದ ಮತ ಚಲಾಯಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಸಹ ಬಾಹ್ಯಾಕಾಶ ಯಾನಿ, ಸಹೋದ್ಯೋಗಿ ವಿಲ್ಮೋರ್ ಕೂಡ ಮತದಾನದ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡರು, ನಾಗರಿಕರ ಭಾಗವಹಿಸುವಿಕೆಯ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ. "ಚುನಾವಣೆಯ ಭಾಗವಾಗಲು ನಾಗರಿಕರಾಗಿ ನಾವೆಲ್ಲರೂ ಹೊಂದಿರುವ ಪ್ರಮುಖ ಜವಾಬ್ದಾರಿಯಾಗಿದೆ. ನಾಸಾ ಅದನ್ನು ಮಾಡಲು ನಮಗೆ ಅವಕಾಶ ನೀಡಿದೆ ಎಂದು ಅವರು ಹೇಳಿದ್ದಾರೆ.
ಡೇವಿಡ್ ವುಲ್ಫ್ 1997 ರಲ್ಲಿ ಈಗ ನಿಷ್ಕ್ರಿಯವಾಗಿರುವ ಮಿರ್ ಬಾಹ್ಯಾಕಾಶ ನಿಲ್ದಾಣದಿಂದ ಮತ ಚಲಾಯಿಸಿದ್ದರು. ಈ ಮೂಲಕ ಬಾಹ್ಯಾಕಾಶದಿಂದ ಮತ ಚಲಾಯಿಸಿದ ಮೊದಲ ಗಗನಯಾತ್ರಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಅಂದಿನಿಂದ ಅನೇಕ ಗಗನಯಾತ್ರಿಗಳು ಬಾಹ್ಯಾಕಾಶದಿಂದ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಕೇಟ್ ರೂಬಿನ್ಸ್ ಅವರು 2020 ರ ಅಮೆರಿಕ ಚುನಾವಣೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೇ ತಮ್ಮ ಮತ ಚಲಾಯಿಸಿದ್ದರು.
ಇದನ್ನು ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ