ವಿಜಯಪುರ: ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಮಂಡನೆಯಾಗಿದೆ. ಬಜೆಟ್ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಕೊಡುಗೆ ನೀಡದಿರುವುದು ಜಿಲ್ಲೆಯ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.
ಶಾಶ್ವತ ಬರಗಾಲ ಪ್ರದೇಶವಾಗಿ ಗುರುತಿಸಿಕೊಂಡಿರುವ ವಿಜಯಪುರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎನ್ನುವ ಬೇಡಿಕೆ ಇದೆ. ಆದರೆ ಈ ಬಾರಿಯೂ ಘೋಷಣೆ ಆಗಲಿಲ್ಲ. ಕೆಲವು ಬೇಡಿಕೆಗಳಿಗೆ ಮಾತ್ರವೇ ಅನುಮೋದನೆ ದೊರಕಿದೆ. ಇಂಡಿ-ನಾಗಠಾಣ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ಸಾವಿರಾರು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.
ಇನ್ನು ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಲಾಗಿದೆ. ಇದರ ಜತೆಗೆ ಸಾಕಷ್ಟು ಯೋಜನೆಗಳು ಜಿಲ್ಲೆಗೆ ಬೇಕಾಗಿದ್ದವು. ಆದರೆ ಎಂದಿನಂತೆ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಜಿಲ್ಲೆಯ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.