ಮುದ್ದೇಬಿಹಾಳ : ಕುಡಿವ ನೀರು ಶುದ್ಧೀಕರಣ ಘಟಕದ ಆವರಣದಲ್ಲಿಯೇ ಬಾಡೂಟ ತಯಾರಿಸಿ ಗುಂಡು, ತುಂಡು ಪಾರ್ಟಿ ಮಾಡಿದ ಘಟನೆ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ. ನೌಕರರ ದುರ್ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸ್ವಾತಂತ್ಯ್ರೋತ್ಸದ ಮುನ್ನಾ ದಿನ ನಾರಾಯಣಪೂರ ರಸ್ತೆಯಲ್ಲಿರುವ ನೀರು ಶುದ್ಧೀಕರಿಸುವ ಘಟಕದ ಓವರ್ ಹೆಡ್ ಟ್ಯಾಂಕ್ ಕೆಳಗಡೆ ನೌಕರರು ಬಾಡೂಟದ ಪಾರ್ಟಿ ಮಾಡಿದ್ದಾರೆ. ಇದರಲ್ಲಿ ಪಟ್ಟಣ ಪಂಚಾಯತ್ ನ ದ್ವಿತೀಯ ದರ್ಜೆ ಸಹಾಯಕ ಬಿ ಟಿ ಹಜೇರಿ, ಪ್ರಥಮ ದರ್ಜೆ ಸಹಾಯಕ ಅನಿಲ್ ಕುಮಾರ್ ಚಟ್ಟೇರ, ಕಿರಿಯ ಆರೋಗ್ಯ ನಿರೀಕ್ಷಕ ಚಂದ್ರಶೇಖರ್ ಸಗರ, ಗುತ್ತಿಗೆ ಆಧಾರದಲ್ಲಿ ಸೇವೆಯಲ್ಲಿರುವ ಅಕೌಂಟೆಂಟ್ ಜಯ ಪ್ರಕಾಶ ಸಜ್ಜನ್, ಐಟಿ ಸಿಬ್ಬಂದಿ ಪ್ರಸನ್ನ ಕುಮಾರ್ ಅವಟಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಈ ವಿಷಯ ಮಾಧ್ಯಮದವರಿಗೆ, ಸಂಘಟನೆಯವರಿಗೆ ತಿಳಿಯುತ್ತದಂತೆ ಎಲ್ಲಾ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಎಲ್ಲರೂ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ವರದಿಗೆ ತೆರಳಿದ್ದ ಪತ್ರಕರ್ತನಿಗೆ ಗಾಯ : ಈ ಘಟನೆಯ ವರದಿಗೆಂದು ತೆರಳಿದ್ದ ಸ್ಥಳೀಯ ಪತ್ರಕರ್ತ ಕಾಶಿನಾಥ್ ಬಿರಾದಾರ, ಪಟ್ಟಣ ಪಂಚಾಯತ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗುವ ವೇಳೆ ಧಾವಿಸಿ ಚಿತ್ರ ಸೆರೆ ಹಿಡಿಯುವ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಅವರೀಗ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೌಕರರ ದುರ್ವರ್ತನೆಗೆ ವ್ಯಾಪಕ ಆಕ್ರೋಶ : ನಾಲತವಾಡದ 40 ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ಸರ್ಕಾರದ ಆದೇಶ ಗಾಳಿಗೆ ತೂರಿ ಬಾಡೂಟ ಮಾಡಿರುವ ಪಟ್ಟಣ ಪಂಚಾಯತ್ ನೌಕರರ ದುರ್ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಡಿಎಸ್‌ಎಸ್ ಮುಖಂಡ ಯಲ್ಲಪ್ಪ ಚಲವಾದಿ ಮಾತನಾಡಿ, ನೀರು ಶುದ್ಧೀಕರಣ ಘಟಕದಲ್ಲಿ ಕಾವಲು ಕಾಯ್ದು ಜನರಿಗೆ ಶುದ್ಧ ಕುಡಿವ ನೀರು ಪೂರೈಸಬೇಕಾದ ಪಟ್ಟಣ ಪಂಚಾಯತ್ ನೌಕರರೇ ಸರ್ಕಾರಿ ಜಾಗದಲ್ಲಿ ಪಾರ್ಟಿ ಮಾಡಿರುವುದು ಖಂಡನೀಯ.
ಇಂತಹ ಬೇಜವಾಬ್ದಾರಿತನದ ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.