ಮುದ್ದೇಬಿಹಾಳ: ಕಿತ್ತು ತಿನ್ನುವ ಬಡತನದ ಮಧ್ಯೆ ಓದಬೇಕು, ಏನಾದರೂ ಸಾಧಿಸಬೇಕು ಎಂಬ ಅದಮ್ಯ ಉತ್ಸಾಹದಿಂದ ಓದಿದ ವಿದ್ಯಾರ್ಥಿಯೊಬ್ಬ ಇದೀಗ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ. ತಾಲೂಕಿನ ಲೊಟಗೇರಿ ಗ್ರಾಮದ ಬಸಪ್ಪ ಸೂಳಿಭಾವಿ ಅವರ ಪುತ್ರ ಯಲ್ಲಾಲಿಂಗ ಸೂಳಿಭಾವಿ SSLCಯಲ್ಲಿ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾನೆ.
ಅನಕ್ಷರಸ್ಥ ತಂದೆ - ತಾಯಿ ಕಡು ಬಡವರಾಗಿದ್ದು, ದುಡಿಯಲೆಂದು ಬೇರೆ ರಾಜ್ಯಕ್ಕೆ ಗುಳೇ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯಗುರು ಇಸ್ಮಾಯಿಲ್ ಮನಿಯಾರ್ ಅವರು, ಯಲ್ಲಾಲಿಂಗನ ತಾಯಿಗೆ ಫಲಿತಾಂಶದ ಬಗ್ಗೆ ಹೇಳಿದ ತಕ್ಷಣ ನನ್ನ ಮಗ ಪಾಸ್ ಆಗ್ಯಾನೋ ಇಲ್ರಿ ಎಂದು ಮುಗ್ಧತೆಯಿಂದ ಕೇಳಿದ್ದಾಳೆ ಎಂದು ತಿಳಿಸುತ್ತಾರೆ.
ಈತನ ಪ್ರತಿಭೆಯನ್ನು ಗಮನಿಸಿದ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ್ ಅವರು ಈತನಿಂದ ಹೆಚ್ಚಿನ ಶುಲ್ಕ ಪಡೆದುಕೊಳ್ಳದೇ ಒಳ್ಳೆಯ ಶಿಕ್ಷಣ ಕೊಡುವ ಮೂಲಕ ಉತ್ತಮ ವಿದ್ಯಾರ್ಥಿಯನ್ನಾಗಿ ರೂಪಿಸಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ನಿರ್ದೇಶಕ ಅಮಿತಗೌಡ ಪಾಟೀಲ್, ಸದಸ್ಯರಾದ ವಿಜಯಕುಮಾರ್ ಪಾಟೀಲ್, ಬೋಧಕ, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ತಾಳಿಕೋಟಿ ಸರ್ವಜ್ಞ ವಿದ್ಯಾಪೀಠದ ಶ್ರೇಯಾ ದೇಸಾಯಿ 625ಕ್ಕೆ 625 ಅಂಕಗಳನ್ನು ಪಡೆದು ಟಾಪರ್ ಆಗಿದ್ದಾರೆ. ವಿದ್ಯಾರ್ಥಿನಿಯ ತಾಯಿ ಅನ್ನಪೂರ್ಣ ದೇಸಾಯಿ ಶಿಕ್ಷಕಿಯಾಗಿದ್ದು, ಮಗಳು ಕಠಿಣ ಪರಿಶ್ರಮದಿಂದ ಓದಿದ್ದು ಹಾಗೂ ಶಿಕ್ಷಕರ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
(ಇದನ್ನೂ ಓದಿ: SSLCಯಲ್ಲಿ C+ .. ವಿದ್ಯಾರ್ಥಿ ದಿಲ್ ಖುಷ್, ಮಳೆಯಲ್ಲೇ ಮಸ್ತ್ ಡ್ಯಾನ್ಸ್)