ವಿಜಯಪುರ: ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸಿಂದಗಿ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಅಕ್ಷತಾ ರಾಠೋಡ 625ಕ್ಕೆ 623 ಅಂಕ ಗಳಿಸುವ ಮೂಲಕ ಸಾಧನೆಗೈದಿದ್ದಾಳೆ.
ಕನ್ನಡ, ಇಂಗ್ಲೀಷ್, ಹಿಂದಿ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲಿ ಶೇ. 100ರಷ್ಟು ಅಂಕ ಪಡೆದಿರುವ ಅಕ್ಷತಾ, ಗಣಿತ ವಿಷಯದಲ್ಲಿ ಮಾತ್ರ 98 ಅಂಕ ಪಡೆದಿದ್ದು, ಕೇವಲ 2 ಅಂಕಗಳಿಂದ ಟಾಪರ್ ಸ್ಥಾನ ಕೈ ತಪ್ಪಿದಂತಾಗಿದೆ. ಅಕ್ಷತಾ ಸಾಧನೆಗೆ ಶಿಕ್ಷಕ ವರ್ಗ, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅನಿಸಿಕೆ ಹಂಚಿಕೊಂಡಿರುವ ಅಕ್ಷತಾ, ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ನೀಡಿದ ಪ್ರೋತ್ಸಾಹವೇ ಈ ಸಾಧನೆಗೆ ಕಾರಣವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾಳೆ.
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಎಸ್.ಡಿ.ಕೆ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ದರ್ಶನ ಚೌತಾಯಿ ಶೇ. 99.30 ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾನೆ.
![SSLC Result](https://etvbharatimages.akamaized.net/etvbharat/prod-images/8367548_474_8367548_1597062383279.png)
ಹಿಂದಿ, ವಿಜ್ಞಾನದಲ್ಲಿ ನೂರಕ್ಕೆ ನೂರು ಅಂಕ, ಕನ್ನಡ 124, ಇಂಗ್ಲೀಷ್ 99, ಗಣಿತ 98, ಸಮಾಜ ವಿಜ್ಞಾನ 99 ಅಂಕ ಪಡೆದಿದ್ದಾನೆ. ತಂದೆ ಪ್ರದೀಪ ಕುಮಾರ್ ಖಾಸಗಿ ಸರ್ವೇಯರ್ ಆಗಿದ್ದು, ತಾಯಿ ಅಶ್ವಿನಿ ಮುದ್ದೇಬಿಹಾಳ ಸರ್ವೇ ಕಚೇರಿಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ಸಾಧನೆಗೆ ಶಿಕ್ಷಕರು, ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.