ಮುದ್ದೇಬಿಹಾಳ, ವಿಜಯಪುರ : ತಾಲೂಕಿನ ಸರೂರ ಗ್ರಾಮದ ಯೋಧ ಹಣಮಂತ್ರಾಯ ಶಿವಪ್ಪ ಹೂಗಾರ (30) ಗ್ರಾಮದ ವ್ಯಾಪ್ತಿಯ ಹೊಲವೊಂದರಲ್ಲಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗುರುವಾರ ಸಂಜೆ ಬೆಳಕಿಗೆ ಬಂದಿದೆ.
ಸಂಜೆಯಾದರೂ ಮನೆಗೆ ಬರಲಿಲ್ಲ ಎಂದು ಹೊಲಕ್ಕೆ ನೋಡಲು ಹೋದಾಗ ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವುದು ಪತ್ತೆಯಾಗಿದೆ. ಹಣಮಂತ್ರಾಯ ಭಾರತೀಯ ಸೇನೆಯಲ್ಲಿ ಜನರಲ್ ಡ್ಯೂಟಿ ಸೋಲ್ಜರ್ ಆಗಿ ಕಳೆದ 10-11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ರಾಜಸ್ತಾನದ ಗಡಿಭಾಗ ಉದಯಪುರ ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ರೈಫಲ್ಸ್ನ 4ನೇ ಯುನಿಟ್‌ನಲ್ಲಿ ಕೆಲಸ ಮಾಡುತ್ತಿದ್ದರು.
2 ದಿನಗಳ ಹಿಂದೆ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಸೇನೆಯಲ್ಲಿನ ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಇತ್ತೀಚೆಗೆ ಆಗ ಮಾನಸಿಕವಾಗಿ ಖಿನ್ನನಾಗಿರುತ್ತಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಸಿಪಿಐ ಆನಂದ ವಾಘ್ಮೋಡೆ ತಿಳಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಮೃತನ ತಂದೆ ಶಿವಪ್ಪ ಹೂಗಾರ ಪ್ರಕರಣ ದಾಖಲಿಸಿದ್ದು, ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಪಿಎಸ್ಐ ರೇಣುಕಾ ಜಕನೂರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಡಕಾಯಿತಿ ಪ್ರಕರಣದ ಆರೋಪಿಗಳನ್ನು ಬಂಧಿಸಲು ತೆರಳಿದ ಪಿಎಸ್‌ಐಗೆ ಮಾರಣಾಂತಿಕ ಹಲ್ಲೆ