ವಿಜಯಪುರ: ಎಲ್ಲವೂ ಸಮಾಜದಿಂದ ಬಂದಿದೆ. ಹಾಗಾಗಿ, ಕಾಲ ಕಾಲಕ್ಕೆ ಸಮಾಜವನ್ನು ಸ್ವಚ್ಛಗೊಳಿಸಬೇಕು. ಮಠ, ರಾಜಕೀಯ ಪಕ್ಷಗಳು ಬೇಧಭಾವ ಮಾಡಬಾರದು. ಸಂಬಂಧಗಳಲ್ಲಿ ದ್ರೋಹ ಬಗೆಯುವ ಕೆಲಸ ಆಗಬಾರದು. ದೇವ ಭಕ್ತಿ, ದೇಶ ಭಕ್ತಿ ಒಂದೇ. ನಾವು ಸರಿಯಾಗಿದ್ರೆ ಎಲ್ಲವೂ ಸರಿಯಾಗಿ ಇರುತ್ತದೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪಠ್ಯದಲ್ಲಿ ಲೈಂಗಿಕ ಶಿಕ್ಷಣ ವಿಚಾರ: ಲೈಂಗಿಕ ವಿಷಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀಗಳು, ನಮ್ಮಲ್ಲಿ ಶಿಕ್ಷಣ ಹಾಗೂ ಮನೋತಜ್ಞರಿದ್ದಾರೆ. ಅವರು ಚರ್ಚಿಸಿ ಈ ಕುರಿತು ತೀರ್ಮಾನ ಮಾಡಬೇಕು. ಕೇವಲ ಒಬ್ಬೊಬ್ಬರೇ ತೀರ್ಮಾನ ಮಾಡಬಾರದು. ಇದರಿಂದ ಸಮಾಜದಲ್ಲಿ ಗೊಂದಲ ನಿರ್ಮಾಣ ಆಗುತ್ತದೆ ಎಂದು ಕಿವಿಮಾತು ಹೇಳಿದರು.
ಜ್ಞಾನ ಯೋಗಾಶ್ರಮಕ್ಕೆ ಪೇಜಾವರ ಶ್ರೀ ಭೇಟಿ: ನಡೆದಾಡುವ ದೇವರೆಂದೇ ಖ್ಯಾತಿ ಗಳಿಸಿದ್ದ ಸಿದ್ದೇಶ್ವರ ಸ್ವಾಮೀಜಿಗಳ ಜ್ಞಾನ ಯೋಗಾಶ್ರಮಕ್ಕೆ ಪೇಜಾವರ ಮಠದ ಶ್ರೀಗಳು ಭೇಟಿ ನೀಡಿದರು. ಬಳಿಕ ಬಸವಲಿಂಗ ಶ್ರೀ ಸೇರಿದಂತೆ ಇತರೆ ಸ್ವಾಮೀಜಿಗಳನ್ನು ಭೇಟಿ ಮಾಡಿ ಕೆಲಕಾಲ ಚರ್ಚಿಸಿದ್ದಾರೆ.
ಇದನ್ನೂ ಓದಿ: ರಾಮ ಸೇವಾ ಸಂಕಲ್ಪ ಅಭಿಯಾನ ಕೈಗೊಳ್ಳುವಂತೆ ಪ್ರಧಾನಿಗೆ ಪೇಜಾವರ ಶ್ರೀ ಸಲಹೆ
ಜೆಡಿಎಸ್ ಪಂಚರತ್ನ ರಥ ಯಾತ್ರೆ: ಜ. 22ರ ವರೆಗೆ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸಾಗಲಿದೆ. ಮೊದಲ ದಿನವಾದ ಮಂಗಳವಾರ ಇಂಡಿ ತಾಲೂಕಿನ ಅಗರಖೇಡ ಗ್ರಾಮಕ್ಕೆ ಮಾಜಿ ಸಿ.ಎಂ.ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಜೆಡಿಎಸ್ ನಾಯಕರು ಅದ್ಧೂರಿಯಾಗಿ ಬರ ಮಾಡಿಕೊಂಡರು. ಇಂದು ಸಿಂದಗಿಯಲ್ಲಿ ಯಾತ್ರೆ ಸಾಗಲಿದೆ.
ಬಳಿಕ ಮಾತನಾಡಿದ ಹೆಚ್ಡಿಕೆ, ನಾವು ಪಂಚರತ್ನ ಯೋಜನೆ ಘೋಷಿಸಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿಯಾಗಲಿದೆ. ಕಾಂಗ್ರೆಸ್ನವರ 2 ಸಾವಿರ ಗೃಹ ಲಕ್ಷ್ಮೀ ಯೋಜನೆ ಮತ್ತು 200 ಯುನಿಟ್ ಉಚಿತ ವಿದ್ಯುತ್ ಕೊಡೋದ್ರಿಂದ ಎಷ್ಟು ಆರ್ಥಿಕ ಹೊರೆ ಬೀಳುತ್ತದೆ ಎನ್ನುವುದನ್ನು ವಿಚಾರ ಮಾಡಬೇಕು. ಈಗಾಗಲೇ 5 ಲಕ್ಷ ಕೋಟಿ ಸಾಲದ ಹೊರೆ ಇದೆ. ಚುನಾವಣೆ ಹೊತ್ತಿನಲ್ಲಿ ಹೀಗೆ ಉಚಿತವಾಗಿ ಘೋಷಣೆ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಸಾಲಕ್ಕೆ ಜೀವ ಕಳ್ಕೋಬೇಡಿ, 4 ತಿಂಗಳು ಸಹಿಸ್ಕೊಳ್ಳಿ, ನಾನೇ ಕಷ್ಟ ಪರಿಹರಿಸ್ತೇನೆ: ಕುಮಾರಸ್ವಾಮಿ
ಒಂದು ತಿಂಗಳಲ್ಲಿ ಕೇಸು ಮುಚ್ಚಿ ಹಾಕ್ತಾರೆ: ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವಹಿಸಿದ ವಿಚಾರವಾಗಿ ಮಾತನಾಡಿದ ಅವರು, ಪ್ರಕರಣವನ್ನು ಸಿಐಡಿಗೆ ವಹಿಸಿರುವುದು ಕಣ್ಣೊರೆಸುವ ತಂತ್ರ. ಒಂದು ತಿಂಗಳೊಳಗೆ ಕೇಸ್ ಮುಚ್ಚಿ ಹಾಕ್ತಾರೆ. ಇದರಲ್ಲಿ ಘಟಾನುಘಟಿ ನಾಯಕರಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ನಿಂದ ಬಿಜೆಪಿಗೆ ಹೋದ 13 ಸಚಿವರ ಸಿಡಿಯನ್ನು ಎಲೆಕ್ಷನ್ಗೂ ಮುನ್ನ ಬಿಡುಗಡೆ ಮಾಡುತ್ತೇವೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಡಿ ಬಗ್ಗೆ ನಾನು ಮಾತನಾಡುವುದಿಲ್ಲ. ಯಾರು ಹೇಳಿದ್ದಾರೋ ಅವರನ್ನೇ ಕೇಳಿ. ಸಿಡಿ ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದರು.
ಇದನ್ನೂ ಓದಿ: ಪಾರದರ್ಶಕ ತನಿಖೆಗಾಗಿ ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ: ಆರಗ ಜ್ಞಾನೇಂದ್ರ