ವಿಜಯಪುರ: ಮಣ್ಣೆತ್ತಿನ ಅಮವಾಸ್ಯೆ ಬಂದ್ರೆ ಸಾಕು ಉತ್ತರ ಕರ್ನಾಟಕದಲ್ಲಿ ಹಬ್ಬದ ವಾತಾವರಣ ಮನೆ ಮಾಡಿರುತ್ತೆ. ರೈತರು ಬೆಳೆಗಳು ಸಮೃದ್ಧವಾಗಿ ಬರಲೆಂದು ವಿಶೇಷವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಕೊರೊನಾ ಹಬ್ಬದ ಛಾಯೆಯನ್ನು ಕಿತ್ತುಕೊಂಡಿದೆ.
ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಇಂದು ಪೂಜೆ ಸಲ್ಲಿಸಲಾಗುತ್ತದೆ. ಆದರೆ ಕೊರೊನಾದಿಂದ ಜನರು ಈ ಬಾರಿ ಹಬ್ಬದಿಂದ ದೂರ ಉಳಿಯುವಂತಾಗಿದೆ. ಅಲ್ಲದೆ ಸೂರ್ಯ ಗ್ರಹಣ ಕೂಡ ಹಬ್ಬಕ್ಕೆ ಕೊಕ್ಕೆ ಹಾಕಿದ ಪರಿಣಾಮ, ನಗರದ ಜನತೆ ಸಂಜೆಯಾಗುತ್ತಿದ್ದಂತೆ ಮನೆಗಳಲ್ಲಿ ಮಣ್ಣಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಸರಳವಾಗಿ ಹಬ್ಬ ಆಚರಿಸಿದ್ದಾರೆ.
ಕೊರೊನಾದಿಂದಾಗಿ ಕುಂಬಾರರು, ಹೂ,ಹಣ್ಣು ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ. ಗ್ರಾಹಕರು ಬಾರದೆ ವ್ಯಾಪಾರಿಗಳು ಕಂಗಾಲಾದ್ರೆ, ಇತ್ತ ಮಣ್ಣಿನ ಎತ್ತುಗಳ ಖರೀದಿಗೆ ಜನರು ಬಾರದೆ ಮಡಿಕೆ ತಯಾರಕರು ತತ್ತರಿಸಿದ್ರು. ಕಳೆದ ವರ್ಷಕ್ಕಿಂತಲೂ ಕಡಿಮೆ ಬೆಲೆ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನ ಮಾರಾಟ ಮಾಡಿದ್ರೂ, ಜನರು ಮಾತ್ರ ಅವರತ್ತ ಸುಳಿದಿಲ್ಲ.
ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಮಣ್ಣೆತ್ತಿನ ಹಬ್ಬ, ಈ ಬಾರಿ ಸರಳವಾಗಿ ಆಚರಣೆ ಆಯಿತು. ಕುಂಬಾರರು, ಹೂ ಹಣ್ಣು ವ್ಯಾಪಾರಿಗಳು ಆರ್ಥಿಕ ಸಂಕಷ್ಟ ಸಿಲುಕುವಂತಾಯಿತು.