ವಿಜಯಪುರ : ಸಂಕ್ರಮಣದ ಸಂದರ್ಭದಲ್ಲಿ ಜರುಗುವ ಉತ್ತರ ಕರ್ನಾಟಕದ ಪ್ರಸಿದ್ಧ ಶ್ರೀ ಸಿದ್ದೇಶ್ವರ ಜಾತ್ರೆ ಈ ವರ್ಷವೂ ಸಹ ವಿಜೃಂಭಣೆಯಿಂದ ಸಂಪ್ರದಾಯದಂತೆ ನಡೆಯುತ್ತಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಾರವಿಡೀ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರದಂದು ಸಿದ್ದೇಶ್ವರ ಜಾತ್ರೆಗೆ ಚಾಲನೆ ದೊರಕಿದ್ದು, ದೇವಸ್ಥಾನವು ವಿದ್ಯುದ್ದೀಪ ಹಾಗೂ ಹೂಮಾಲೆಗಳಿಂದ ಅಲಂಕೃತಗೊಂಡಿದೆ. ದೇವರಿಗೆ ದಿನನಿತ್ಯ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು, ನಿನ್ನೆ ಶನಿವಾರದಂದು ನಂದಿ ಧ್ವಜಗಳ ಉತ್ಸವ ನಡೆಯಿತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶೇಷ ಪೂಜೆ ಸಲ್ಲಿಸಿ, ನಂದಿ ಧ್ವಜಗಳ ಮೆರವಣಿಗೆಗೆ ಚಾಲನೆ ನೀಡಿದ್ದರು.
ಸಿದ್ದೇಶ್ವರ ದೇವಸ್ಥಾನದಿಂದ ಬಜಾರ್ನ ಪ್ರಮುಖ ರಸ್ತೆಗಳಲ್ಲಿ, ಲಿಂಗದಗುಡಿಯವರೆಗೆ ನಂದಿ ಧ್ವಜಗಳ ಉತ್ಸವ ನಡೆಯಿತು. ಲಿಂಗದಗುಡಿಯಲ್ಲಿರುವ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ಕಾರ್ಯಕ್ರಮವೂ ನಿನ್ನೆ ನಡೆಯಿತು. ಸಂಜೆ ದೇವಸ್ಥಾನದ ಆವರಣದಲ್ಲಿ ಭಜನೆ ಮತ್ತು ಮನರಂಜನೆ ಕಾರ್ಯಕ್ರಮಗಳು ನಡೆದವು. ಭಾನುವಾರ ಶ್ರೀ ಸಿದ್ದರಾಮನ ಯೋಗದಂಡಕ್ಕೆ ಅಕ್ಷತಾರ್ಪಣೆ ಹಾಗೂ ಭೋಗಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ದಂಪತಿ, ಇನ್ನಿತರರು ಪಾಲ್ಗೊಂಡಿದ್ದರು. ಬಳಿಕ ನಂದಿ ಧ್ವಜಗಳ ಉತ್ಸವದ ಜೊತೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸೋಮವಾರ ಸಂಕ್ರಮಣ ಆಚರಣೆ, ಮೆರವಣಿಗೆ, ಹೋಮ-ಹವನ ಕಾರ್ಯಕ್ರಮ ಮತ್ತು ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ ನಡೆಯಲಿದೆ.
ಭಾರ ಎತ್ತುವ ಸ್ಪರ್ಧೆ: ಜ. 16 ರಂದು ಜಾತ್ರೆ ಅಂಗವಾಗಿ ನಂದಿ ಧ್ವಜಗಳ ಭವ್ಯ ಮೆರವಣಿಗೆ ನಡೆಯಲಿದ್ದು, ಸಂಜೆ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. 17 ರಂದು ಭಾರ ಎತ್ತುವ ಸ್ಪರ್ಧೆ ಮತ್ತು ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ತೊರವಿ ಸಮೀಪ ಬೃಹತ್ ಜಾನುವಾರು ಜಾತ್ರೆ ನಡೆಯಲಿದೆ. ಅಲ್ಲದೇ ತೋಟಗಾರಿಕೆ ಇಲಾಖೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಿನ್ನೆಯಿಂದ ಮೂರು ದಿನಗಳ ಕಾಲ ಫಲ ಪುಷ್ಪ ಮೇಳ ಮತ್ತು ತೋಟಗಾರಿಕಾ ಅಭಿಯಾನ ಆಯೋಜಿಸಲಾಗಿದೆ.
ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ಸಿದ್ಧರಾಮನ ಯೋಗ ದಂಡಕ್ಕೆ ಅಕ್ಷತಾರ್ಪಣೆ ಭೋಗಿ ಕಾರ್ಯಕ್ರಮ ಇದೆ. ಭೋಗಿಯಲ್ಲಿ ಪ್ರತಿಮನೆಯಲ್ಲಿ ತಮಗೆ ಇಷ್ಟವಿರುವ ಆಹಾರವನ್ನು ಮಾಡಿ ತಿನ್ನಬೇಕು ಎಂಬುದು ಪದ್ಧತಿ. ಸಿದ್ದೇಶ್ವರರದು ದಂಡದ ಜೊತೆಗೆ ಮದುವೆಯಾಗುತ್ತದೆ. ಇಂದು ಆ ಮದುವೆ ಕಾರ್ಯಕ್ರಮ ಇದ್ದಂತೆ, ನಾಳೆ ಅಗ್ನಿ ಇದೆ. ಅಂದರೆ ಮುಂದೆ ಮದುವೆಯಾಗುವ ಮಹಿಳೆ ಅಗ್ನಿಯಲ್ಲಿ ಬಿದ್ದಂತಹ ಸಂಕೇತ. ಸೊಲ್ಲಾಪುರದಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ಜೀವಂತ ಸಮಾಧಿಯಾಗುತ್ತಾರೆ. ಆದರೆ, ಅವರು ತಾನು ಒಳಗಿದ್ದು ಜೀವಂತವಾಗಿರುತ್ತೇನೆ. ಯಾವಾಗಲೂ ಶ್ರೀ ಶೈಲಮಲ್ಲಿಕಾರ್ಜುನನ ಭಕ್ತನಾಗಿ ನಿಮಗೆಲ್ಲ ಒಳ್ಳೆಯದಾಗುತ್ತದೆ. ಅವರಿಗೆ ಮೃತ್ಯುಯೆಂಬುದು ಇಲ್ಲ, ಅವರು ಜೀವಂತವಾಗಿರುತ್ತಾರೆ ಎಂದು ನಾವೆಲ್ಲ ನಂಬಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ : ಅರಕೇರಿ ಅಮೋಘ ಸಿದ್ದೇಶ್ವರ ಜಾತ್ರೆ: ಭಂಡಾರದಲ್ಲಿ ಮಿಂದೆದ್ದ ಭಕ್ತರು