ವಿಜಯಪುರ : ಸಿದ್ದರಾಮಯ್ಯನವರಿಗೆ ಪ್ರತಿಪಕ್ಷದಲ್ಲಿದ್ದುಕೊಂಡು ಏನಾದ್ರೂ ಕೆಲಸ ಮಾಡಬೇಕು. ಅದಕ್ಕಾಗಿ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಎಡವಿದೆ ಎಂದು ಹೇಳ್ತಾರೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಮೊನ್ನೆ ಸಿಎಂ ಭೇಟಿ ಮಾಡಿ ಕೊರೊನಾ ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ನಾನೇ ನಿದರ್ಶನ. ಆದರೆ, ಸಿದ್ದರಾಮ ಯಾಕೆ ಹೀಗೆ ಮಾತನಾಡುತ್ತಾರೋ ಗೊತ್ತಿಲ್ಲ. ಒಳಗೊಂದು, ಹೊರಗೊಂದು ಮಾತನಾಡುತ್ತಾರೆ. ಪ್ರತಿಪಕ್ಷದವರು ವಿರೋಧ ಮಾಡ್ಬೇಕಾಗುತ್ತೆ. ನಾಲ್ಕು ಮಾತು ಹೇಳ್ಬೇಕಾಗುತ್ತೆ ಎಂದು ವ್ಯಂಗ್ಯವಾಡಿದರು.
ಹೆಚ್ ವಿಶ್ವಾನಾಥ್ರನ್ನು ಏಕಾಂಗಿ ಮಾಡಿಲ್ಲ. ಎಲ್ಲವನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿದೆ. ನಾವು ಕೂಡ ಅವರಿಗೆ ಯಾವುದಾರೂ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ನೀಡುವ ವಿಚಾರ ಈಗಾಗಲೇ ಕ್ಯಾಬಿನೆಟ್‌ನಲ್ಲಿ ನಿರ್ಧಾರವಾಗಿದೆ. ಯಾವುದಕ್ಕೆ ಎಷ್ಟು ದರ ನಿಗದಿ ಮಾಡಬೇಕೆಂದು ನಿರ್ಧರಿಸಲಾಗಿದೆ ಎಂದರು. ಮಹಾರಾಷ್ಟ್ರದಿಂದ ಆಗಮಿಸಿದ ವ್ಯಕ್ತಿಗಳಲ್ಲಿ ಪಾಸಿಟಿವ್ ಕಂಡು ಬರುತ್ತಿದೆ. ಹೀಗಾಗಿ ಸರ್ಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಅನುಸರಿಸುತ್ತಿದೆ. ಅಲ್ಲದೆ ಸರಿಯಾಗಿ ಚಿಕಿತ್ಸೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಎಸ್‌ಎಸ್ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲೂ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
70 ದಿನಗಳ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ತೊಂದರೆಗಳಾಗಿವೆ. ಹೀಗಾಗಿ ಮತ್ತೆ ಲಾಕ್‌ಡೌನ್ ಮಾಡುತ್ತಿಲ್ಲ. ಬೆಂಗಳೂರಿನಲ್ಲಿ 10 ಸಾವಿರಕ್ಕೂ ಅಧಿಕ ಜನ ಸೇರುವ ಪ್ರದೇಶದಲ್ಲಿ ಲಾಕ್‌ಡೌನ್ ಮಾಡಲಾಗುವುದು ಎಂದು ಚರ್ಚೆ ನಡೆದಿದೆ. ಕೊರೊನಾ ನಿಯಂತ್ರಣಕ್ಕೆ ಬೇಕಾದ ಖಾಸಗಿ ಆಸ್ಪತ್ರೆಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಬೆಂಗಳೂರಿನ ಎಲ್ಲಾ ಮಂತ್ರಿಗಳು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ ಎಂದರು.