ವಿಜಯಪುರ: ಸಿಂದಗಿ ಉಪಚುನಾಣೆಗೋಸ್ಕರ ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಮತಯಾಚನೆ ಮಾಡ್ತಿದ್ದು, ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಮಿಸ್ಟರ್, ಬಸವರಾಜ ಬೊಮ್ಮಾಯಿ ಒಂದು ಕೆಲಸ ಮಾಡಿಲ್ಲ. ಕೆಲಸ ಮಾಡಿದ್ದರೆ ತಾನೇ ಹೇಳಬೇಕು. ಒಂದೇ ವೇದಿಕೆಯ ಮೇಲೆ ಬನ್ನಿ ಸಣ್ಣ ಚರ್ಚೆ ಮಾಡೋಣ. ಮಾಡಿರುವ ಕೆಲಸ ಹೇಳಬೇಕು ಎಂದರೆ ಧಮ್ ಬೇಕಲ್ಲ. ಬಸವರಾಜ ಬೊಮ್ಮಾಯಿ ಸುಳ್ಳು ಹೇಳೋದು, ಹೀಗಾಗಿ ಚರ್ಚೆಗೆ ಬರುತ್ತಿಲ್ಲ. ನಿಮಗೆ ಧಮ್ ಇದ್ರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಸಿಂದಗಿ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆ ನಾವು ಯಾರೂ ಬಯಸಿರಲಿಲ್ಲ. ಎಂ ಸಿ ಮನಗೂಳಿ ಅವರ ನಿಧನದಿಂದ ಈ ಚುನಾವಣೆ ನಡೆಯುತ್ತಿದೆ. ಮನಗೂಳಿ ಅವರು ನನಗೆ ಬಹಳ ಆತ್ಮೀಯರು. ನನ್ನೊಂದಿಗೆ ಅವರು ಬಹಳ ಹತ್ತಿರದ ಒಡನಾಟ ಇಟ್ಕೊಂಡಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಳೆಯ ಗೆಳತನವನ್ನು ನೆನಪಿಸಿಕೊಂಡರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ಶರಣಪ್ಪ ಸುಣಗಾರ ಅವರು ಈ ಭಾಗದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ.ಅವರ ಮನವೊಲಿಸಿ ನಾವು ಅಶೋಕ್ ಮನಗೂಳಿ ಅವರಿಗೆ ಟಿಕೆಟ್ ನೀಡಿದ್ದೇವೆ. ಸೂರ್ಯ ಪೂರ್ವದಲ್ಲಿ ಹುಟ್ಟುವದು ಎಷ್ಟು ಸತ್ಯವೋ, ಅಶೋಕ್ ಮನಗೂಳಿ ಗೆಲುವು ಕೂಡ ಅಷ್ಟೇ ಸತ್ಯ ಎಂದರು. ಬಿಜೆಪಿ ಅಧಿಕಾರದಲ್ಲಿ ಕಾಂಗ್ರೆಸ್ ಯೋಜನೆಗಳನ್ನು ಮೊಟುಕುಗೊಳಿಸುತ್ತಿದೆ ಎಂದು ಆರೋಪ ಮಾಡಿದ ಸಿದ್ದು, 7 ಕೆಜಿಯಿಂದ 5 ಕೆಜಿ ಅಕ್ಕಿ ಇಳಿಸಿದ್ದಾರೆ. ಈ ಕುರಿತು ನಾನು ಮಿಸ್ಟರ್ ಯಡಿಯೂರಪ್ಪಗೆ ಹೇಳಿದೆ. ಆಗ ಯಡಿಯೂರಪ್ಪ ದುಡ್ಡಿಲ್ಲ ಎಂದಿದ್ದರು. ಈ ವೇಳೆ ಕುರ್ಚಿ ಬಿಟ್ಟು ಇಳಿಯುವಂತೆ ವಾರ್ನ್ ಮಾಡಿದ್ದೇನು ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಸಮಸ್ಯೆ ಆಗುತ್ತಿದೆ. 10 ಕೆಜಿ ಅಕ್ಕಿ , 10 ಸಾವಿರ ಕೊಡಿ ಎಂದು ತಿಳಿಸಿದ್ರೂ, ಯಡಿಯೂರಪ್ಪ ಜಪ್ಪಯ್ಯ ಅನಲಿಲ್ಲ. ಒಂದು ವೇಳೆ ನಮ್ಮ ಸರ್ಕಾರ ಇದ್ದರೆ, 10 ಕೆಜಿ ಅಕ್ಕಿ ಜೊತೆಗೆ 10 ಸಾವಿರ ಕೊಡುತ್ತಿದ್ದೆ ಎಂದರು.
ಈ ಬಾರಿ ಅಶೋಕ್ ಮನಗೂಳಿ ಗೆಲ್ಲಿಸಿ, ಮುಂದಿನ ಚುನಾವಣೆಯಲ್ಲಿ ನಾವೇ ಗೆದ್ದು ಬರುತ್ತೇವೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಸಚಿವ ಉಮೇಶ್ ಕತ್ತಿ ಹೇಳುತ್ತಾರೆ 5 ಕೆಜಿ ಸಾಕು ಎಂದು. ಮಿಸ್ಟರ್ ಉಮೇಶ ಕತ್ತಿ, ನಿನಗೆ ಶುಗರ್ ಬಂದಿದೆ. ನೀನು ಅಕ್ಕಿ ತಿನ್ನಲ್ಲ, ಬಡವರಿಗೆ ಉಪಯೋಗವಾಗುತ್ತೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಬುದ್ಧಿವಾದ ಹೇಳಿದರು.
ಜನರು ನಿಮ್ಮನ್ನ ಲಾಕ್ ಮಾಡ್ತಾರೆ:ಇವರು ಸರ್ಕಾರ ಬಂದ ಮೇಲೆ ನಮ್ಮ ಶಾಸಕರುಗಳಿಗೆ ಮತಕ್ಷೇತ್ರದಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಕ್ಕಾಗಲಿಲ್ಲ. ಪ್ರತಿ ವರ್ಷ 3 ಲಕ್ಷ ಮನೆ ನಾನು ಮಂಜೂರು ಮಾಡಿದ್ದೆ. ನಾವು ಅರ್ಧ ಕಟ್ಟಿದ ಮನೆಗಳಿಗೆ ದುಡ್ಡು ಕೊಡೋಕೆ ಇವರಿಂದ ಆಗುತ್ತಿಲ್ಲ. ಮನೆ ಇಲ್ಲದವರಿಗೆ ಹಣ ಕೊಡೋದು ಲಾಕ್ ಮಾಡಿದರೆ, ಬಸವರಾಜ ಬೊಮ್ಮಾಯಿ ಜನ ನಿಮಗೆ ಲಾಕ್ ಮಾಡುತ್ತಾರೆ ಎಂದು ಎಚ್ಚರಿಸಿದರು.
ಎಲ್ಲ ಮಂತ್ರಿಗಳು ಹಣ ತಗೊಂಡು ಬಂದು ಇಲ್ಲಿ ಕೂತಿದ್ದೀರಿ.ಕೊರೊನಾ ಸಂದರ್ಭದಲ್ಲಿ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದರು ಯಾರಿಗೂ ಕೊಡಲಿಲ್ಲ. ಕೋವಿಡ್ ವೇಳೆ 4 ಲಕ್ಷ ಜನ ಸತ್ತು ಹೋದರೆ, ಆದರೆ 40 ಸಾವಿರ ಜನ ಮಾತ್ರ ಸತ್ತರು ಎಂದು ಬುರುಡೆ ಬಿಡುತ್ತಿದ್ದಾರೆ ಎಂದರು.
ಮೋದಿ ವಿರುದ್ಧ ವಾಗ್ದಾಳಿ: ನರೇಂದ್ರ ಮೋದಿ ಅಚ್ಚೇದಿನ್ ಆಯೇಂಗೇ ಎಂದು ಹೇಳುತ್ತಾ ಹೋದರು.ಯಾವುದೇ ಅಚ್ಚೇದಿನ್ ಬರಲಿಲ್ಲ. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ 47 ಇದ್ದದ್ದು ಇದೀಗ 111 ರೂಪಾಯಿ, ಗ್ಯಾಸ್ ಬೆಲೆ 416 ಇದ್ದದ್ದು ಇಂದು 960, ಅಡುಗೆ ಎಣ್ಣೆ 40 ಇದ್ದದ್ದು ಇಂದು 200. ಸಾಮಾನ್ಯ ಜನರ ರಕ್ತ ಹಿಂಡಬೇಡಿ ಎಂದರೆ, ರಸ್ತೆ ಅಭಿವೃದ್ಧಿ ಮಾಡಬೇಕು, ಹಿಂದಿನ ಸರ್ಕಾರ ಸಾಲಮಾಡಿತ್ತು ಎಂದು ಹೇಳುತ್ತಾರೆ.
ಇಂದು ಡಿಸೇಲ್ ಮೇಲೆ ತೆರಿಗೆ 10 ಪಟ್ಟು ಜಾಸ್ತಿ ಆಯಿತು. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ಒಳ ಒಪ್ಪಂದ: ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಯನ್ನು ಕಣಕ್ಕಿಳಿಸಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಈ ರೀತಿ ಒಳಒಪ್ಪಂದ ಮಾಡಿ ಕೊಂಡಿವೆ. ಬಿಜೆಪಿ ಹಾಗೂ ಜೆಡಿಎಸ್ಗೆ ಯಾವುದೇ ವ್ಯತ್ಯಾಸ ಇಲ್ಲ. ಬಿಜೆಪಿಯ ಬಿ ಟೀಮ್ ಜೆಡಿಎಸ್ ಎಂದರು.
ದುಡ್ಡಿಗೆ ಬಲಿ ಯಾಗಬೇಡಿ: ಬಿಜೆಪಿಯವರು ಅವರಪ್ಪನ ಮನೆಯಿಂದ ದುಡ್ಡು ತರಲ್ಲ. ಅದನ್ನು ತಗೊಳ್ಳಿ ಕಾಂಗ್ರೆಸ್ಗೆ ಮತ ಹಾಕಿ ಎಂದು ಸಿದ್ದರಾಮಯ್ಯ ಹೇಳಿದರು.
ಸೀರೆ ಒಡ್ಡಿ ಮತಯಾಚನೆ: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ತಾಯಿ ಸಿದ್ದಮ್ಮ ಉಡಿ ಒಡ್ಡಿ ಮತ ಭಿಕ್ಷೆ ಕೇಳಿದ ಪ್ರಸಂಗ ಸಹ ನಡೆಯಿತು. ದಿವಂಗತ ಎಂಸಿ ಮನಗೂಳಿ ಪತ್ನಿ ಸಿದ್ದಮ್ಮ ಮನಗೂಳಿ. ತನ್ನ ಮಗ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ ಮತ ಹಾಕುವಂತೆ ಮತಯಾಚನೆ ಮಾಡಿದರು.