ಗದಗ: ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಹುದ್ದೆಗಾಗಿ 2,500 ಕೋಟಿ ಬೇಡಿಕೆ ಇಟ್ಟಿದ್ದರೆಂಬ ಹೇಳಿಕೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 'ಯತ್ನಾಳ್ ಬಿಜೆಪಿ ಲೀಡರ್, ಕೇಂದ್ರದ ಮಾಜಿ ಸಚಿವರೂ ಆಗಿದ್ದು, ಅವರು ಹೇಳಿದ್ದು ಸತ್ಯ ಇರಬೇಕು ಅಲ್ವಾ? ಎಂದು ಕುಹಕವಾಡಿದ್ದಾರೆ.
ಬಿಜೆಪಿ ಶಾಸಕ ಯತ್ನಾಳ್ ಅವರು ಹೇಳಿರೋದು ಯಾವುದೂ ಕಾರ್ಯಗತವಾಗಿಲ್ಲ. ಸಿಎಂ ಹುದ್ದೆಗಾಗಿ 2,500 ಕೋಟಿ ನೀಡಿರೋ ಬಗ್ಗೆ ನನಗೆ ಗೊತ್ತಿಲ್ಲ. ಯತ್ನಾಳ್ ಹೇಳಿಕೆ ಸತ್ಯ ಇರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇದೇ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಯತ್ನಾಳ್ ಅವರ ಹೇಳಿಕೆಯಲ್ಲಿ ಸತ್ಯವಿದೆ. ತನಿಖೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು. ಯತ್ನಾಳ್ ಬಿಜೆಪಿಯ ಹಿರಿಯ ಶಾಸಕರು. ಈ ಸಂಸ್ಕೃತಿ ಬಿಜೆಪಿಯಲ್ಲಿ ಆರಂಭವಾಗಿದೆ. ಈ ಹಿಂದೆ ಸಿಎಂ ಆದವರು ಕೊಟ್ಟಿರಬಹುದು ಎಂದು ಕುಟುಕಿದ್ದಾರೆ.
ಎಸ್ಟಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಮೀಸಲಾತಿ ಜಾರಿಯಾದರೆ ಒಳ್ಳೆಯದು. ಸರ್ಕಾರ ಇರುವುದರೊಳಗೆ ಆದರೆ ಒಳ್ಳೆಯದು. ಇಲ್ಲವಾದರೆ ಕಾದು ನೋಡೋಣ ಎಂದರು. ಮೈಸೂರಿನಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿಯೂ ಮಾತನಾಡಿದ ಅವರು, ಕಾನೂನಿನಲ್ಲಿ ಶಿಕ್ಷೆಗೆ ಅವಕಾಶವಿದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹಿಂದೆ ಇಂತಹ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಹಿಂದೆ ಆದಂತೆ ಇಲ್ಲೂ ಕ್ರಮ ಜರುಗಬೇಕು ಎಂದು ಆಗ್ರಹಿಸಿದರು.
ಪಿಎಸ್ಐ ನೇಮಕಾತಿ ಅಕ್ರಮದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ತನಿಖೆಯನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದದಲ್ಲಿ ಸಚಿವರು, ಶಾಸಕರು ಉನ್ನತ ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಾಗಾಗಿ ಸಿಬಿಐ ತನಿಖೆಯಾದ್ರೆ ಸತ್ಯಾಂಶ ಹೊರಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಲಂಚ ಆರೋಪ ಮಾಡಿರುವ ಯತ್ನಾಳ್ ತನಿಖೆಗೆ ಒಳಪಡಿಸಿ: ಎಸಿಬಿಗೆ ಕಾಂಗ್ರೆಸ್ ದೂರು