ಮುದ್ದೇಬಿಹಾಳ: ಕೊರೊನಾ 2ನೇ ಅಲೆ ಈಗಾಗಲೇ ವ್ಯಾಪಕವಾಗಿ ಹರಡಿಕೊಂಡಿದೆ. ಇಂತಹ ಸಮಯದಲ್ಲಿ ಜನರು ಇನ್ನೂ ಸಂಯಮ ತೋರದೆ ಗುಂಪು ಸೇರುವುದು, ನಿರ್ಲಕ್ಷ್ಯ ವಹಿಸುವುದು ನಡೆಯುತ್ತಲೇ ಇದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬೀದಿ ಬೀದಿಗಳಲ್ಲಿ ಹೆಣಗಳ ರಾಶಿ ನೋಡಬೇಕಾದ ದುಸ್ಥಿತಿ ಎದುರಾಗುತ್ತದೆ. ಎಚ್ಚರಿಕೆಯಿಂದ ಮನೆಯಲ್ಲಿ ಇರಿ ಎಂದು ಆರೋಗ್ಯ ಕವಚ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ, ದೂರದರ್ಶನ ಕಲಾವಿದ ಶ್ರೀಶೈಲ ಹೂಗಾರ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಕಣ್ಣೀರಿಡುತ್ತಲೇ ಸದ್ಯದ ಪರಿಸ್ಥಿತಿ ಹೇಗಿದೆ? ಎಂಬುದನ್ನು ಬಿಚ್ಚಿಟ್ಟಿದ್ದಾರೆ. ನಾವು ದೂರದ ಅನ್ಯ ದೇಶಗಳಲ್ಲಿ ಕೊರೊನಾ ಸಾವು ನೋವಿನ ಲೆಕ್ಕ ಕೇಳುತ್ತಿದ್ದೆವು. ಆದರೆ ಈಗ ನಮ್ಮ ಮನೆಯ ಪಕ್ಕದಲ್ಲಿಯೇ ಆ ಸಾವು ನೋವಿನ ಸುದ್ದಿಯನ್ನು ತಿಳಿದರೂ ಗಂಭೀರತೆ ಅರ್ಥ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂತಹ ನಿರ್ಲಕ್ಷ್ಯಕ್ಕೆ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ ಎಂದು ಕಣ್ಣೀರು ಹಾಕಿದ್ದಾರೆ.