ವಿಜಯಪುರ: ಮಹಾ ಶಿವರಾತ್ರಿ ಹಿನ್ನೆಲೆ ನಗರದ ಹೊರವಲಯದ ಶಿವಗಿರಿಯ ಬೃಹತ್ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತಸಾಗರವೇ ಹರಿದುಬರುತ್ತಿದೆ.
ನಗರದ ಉಕ್ಕಲಿ ರಸ್ತೆಯಲ್ಲಿರುವ ಶಿವಗಿರಿಯಲ್ಲಿ ಚಲನಚಿತ್ರ ನಿರ್ಮಾಪಕ ಬಸಂತ ಕುಮಾರ ಪಾಟೀಲ 14 ವರ್ಷಗಳ ಹಿಂದೆ 85 ಅಡಿ ಉದ್ದದ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಇದನ್ನು ನೋಡಲು ಪ್ರತಿದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇನ್ನು ಇಂದು ಶಿವರಾತ್ರಿ ಹಿನ್ನೆಲೆ ವಿಜಯಪುರದ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಬೆಳಗ್ಗೆ 4 ಗಂಟೆಯಿಂದಲೇ ವಿಶೇಷ ಪೂಜೆ ನೇರವೇರಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ವಿಶ್ವವಿಖ್ಯಾತ ಗೋಲಗುಮ್ಮಟ ವೀಕ್ಷಿಸಲು ಬರುವ ಪ್ರವಾಸಿಗರು ಶಿವಗಿರಿಗೂ ಆಗಮಿಸಿ ದೇಶದ ಎರಡನೇ ಅತಿದೊಡ್ಡ ಶಿವಮೂರ್ತಿಯ ದರ್ಶನ ಪಡೆಯುತ್ತಿದ್ದಾರೆ.