ಮುದ್ದೇಬಿಹಾಳ: ಮುದ್ದೇಬಿಹಾಳದಲ್ಲಿ ಆರ್ಟಿಒ ಕಚೇರಿಯನ್ನು ಅತಿ ಶೀಘ್ರದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.
ಮತಕ್ಷೇತ್ರದ ತಾಳಿಕೋಟಿ, ನಾಲತವಾಡ ಹಾಗೂ ಮುದ್ದೇಬಿಹಾಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುದ್ದೇಬಿಹಾಳ ಮತಕ್ಷೇತ್ರದ ಜನ ವಾಹನ ಲೈಸನ್ಸ್ಗಾಗಿ ವಿಜಯಪುರಕ್ಕೆ ಹೋಗುವುದನ್ನು ತಪ್ಪಿಸಲು ಮುದ್ದೇಬಿಹಾಳದಲ್ಲಿ ಆರ್ಟಿಒ ಕಚೇರಿಗೆ ಬೇಡಿಕೆಯಿದ್ದು ಅದನ್ನು ನಾನೇ ಮುಂಬರುವ ದಿನಗಳಲ್ಲಿ ಭೂಮಿ ಪೂಜೆ ಮಾಡಲು ಬರುವುದಾಗಿ ಸಚಿವರು ಹೇಳಿದರು.
ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳನ್ನು ಒಳಗೊಂಡಿರುವ ಉತ್ತರ ಕರ್ನಾಟಕದಲ್ಲಿ ಕಾರ್ಖಾನೆಗಳನ್ನು ಯಾರು ಪ್ರಾರಂಭಿಸುತ್ತಾರೆಯೋ ಅವರಿಗೆ ಶೇ.5ರಷ್ಟು ಸಬ್ಸಿಡಿಯನ್ನು ಸರ್ಕಾರದಿಂದ ನೀಡಲಾಗುವುದು. ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು. ಉತ್ತರ ಕರ್ನಾಟಕದವರೇ ಕೈಗಾರಿಕಾ ಸಚಿವರಾಗಿರುವ ಜಗದೀಶ್ ಶೆಟ್ಟರ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ನಮ್ಮ ಯುವಕರಿಗೆ ಉದ್ಯೋಗವಕಾಶ ದೊರೆಯುತ್ತದೆ. ಜನರಿಗೆ ಅನುಕೂಲವಾಗುತ್ತದೆ. ಬೆಂಗಳೂರು, ಮೈಸೂರು, ಮಂಗಳೂರು ಎಂದು ಹೋಗುವ ಕೈಗಾರಿಕೆಗಳನ್ನು ಈ ಭಾಗದಲ್ಲಿ ಸೆಳೆದು ಅಭಿವೃದ್ಧಿ ಸಾಧನೆಗೆ ಮುಂದಾಗಬಹುದಾಗಿದೆ ಎಂದರು.
ಗಾಳಿ ಬೀಸಿದಾಗ ತೂರಿಕೊಳ್ಳಬೇಕು: ಭಗವಂತನ ಕೃಪೆ, ರಾಷ್ಟ್ರೀಯ ನಾಯಕರ ಆಶೀರ್ವಾದ ಯಡಿಯೂರಪ್ಪ ಅವರ ಸಹಕಾರದಿಂದ ಬೆಳಗಾವಿ ಹಾಗೂ ಬಾಗಲಕೋಟೆಯ ಅವಳಿ ಜಿಲ್ಲೆಯ ಇಬ್ಬರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಸರ್ಕಾರ ಮಾಡಿದೆ. ಗಾಳಿ ಬೀಸಿದಾಗ ತೂರಿಕೊಳ್ಳುವ ಕೆಲಸ ನಮ್ಮಿಂದ ಆಗಬೇಕಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಮಾರ್ಮಿಕವಾಗಿ ಹೇಳಿದರು.
ಸ್ವಾತಂತ್ರ್ಯನಂತರ ಅತೀ ಹೆಚ್ಚು ಅನುದಾನ ಬಿಡುಗಡೆ: ಬಿಜೆಪಿ ಸರ್ಕಾರ ಬಂದ ಒಂದು ವರ್ಷದಲ್ಲಿ ಕ್ಷೇತ್ರಕ್ಕೆ 20 ಕೋಟಿ ರೂ. ಅನುದಾನ ಸಿಕ್ಕಿದೆ. ಹಿಂದೆ ಎರಡು ಕೋಟಿ, ಮೂರು ಕೋಟಿ ರೂ.ಅನುದಾನ ಬಂದರೆ ದೊಡ್ಡದು ಎಂಬಂತೆ ಇತ್ತು. ಆದರೆ ಪ್ರವಾಹ, ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನನ್ನ ಕ್ಷೇತ್ರಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಸವದಿ ಅವರು ಅನುದಾನದಲ್ಲಿ ಕೊರತೆ ಆಗಬಾರದು ಎಂಬ ಕಾರಣಕ್ಕೆ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದಾರೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ನಾನು ಬಿಜೆಪಿಗೆ ಬರಲು, ನನ್ನನ್ನು ಪಕ್ಷಕ್ಕೆ ಕರೆತರಲು ಲಕ್ಷ್ಮಣ್ ಸವದಿ ಅವರ ಪಾತ್ರ ಅಗಾಧವಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿ 4 ಕೋಟಿ ರೂ. ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದರು.