ವಿಜಯಪುರ: ದ್ರಾಕ್ಷಿ, ಲಿಂಬೆ ಬೆಳೆಗೆ ರಾಜ್ಯದಲ್ಲಿ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಈಗ ಸೀತಾಫಲ ಹಣ್ಣು ಬೆಳೆಯುವತ್ತ ಅನ್ನದಾತರು ಚಿತ್ತ ಹರಿಸಿದ್ದಾರೆ. ಕಡಿಮೆ ಬಂಡವಾಳ ಹಾಗೂ ಯಾವುದೇ ಕೀಟನಾಶಕ ಔಷಧಿ, ರಾಸಾಯನಿಕ ಗೊಬ್ಬರ ಉಪಯೋಗಿಸದೆಯೇ ಕೇವಲ ತೋಟದಲ್ಲಿ ದೊರೆಯುವ ಗೋಮೂತ್ರ, ತಿಪ್ಪೆಗೊಬ್ಬರ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಸೀತಾಫಲ ಹಣ್ಣು ಬೆಳೆಯುತ್ತಿದ್ದು ದ್ರಾಕ್ಷಿ ಮೇಲಿನ ವ್ಯಾಮೋಹ ಮರೆತು ಕಷ್ಟದಾಯಕವಲ್ಲದ ಹಣ್ಣು ಬೆಳೆದು ಆರ್ಥಿಕವಾಗಿ ರೈತರು ಸಬಲರಾಗುತ್ತಿದ್ದಾರೆ.
ಇದಕ್ಕೆ ನಿವೃತ್ತ ಶಿಕ್ಷಕರೊಬ್ಬರ ಯಶೋಗಾಥೆ ಉದಾಹರಣೆ. ಇವರ ಸೀತಾಫಲ ಕೃಷಿ ನೋಡಿ ಅಕ್ಕಪಕ್ಕದ ರೈತರಿಗೂ ಸಹ ಇದೇ ಬೆಳೆ ಬೆಳೆಯಲು ಪ್ರೇರಣೆ ದೊರೆತಿದೆ. ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ನಿವೃತ್ತ ಶಿಕ್ಷಕ ಕಾಶಿರಾಯಗೌಡ ಬಿರಾದಾರ ಎಂಬುವರು ತಮ್ಮ 12 ಎಕರೆ ತೋಟಗಾರಿಕೆ ಜಮೀನಿನ ಪೈಕಿ 4 ಎಕರೆಯಲ್ಲಿ ಎರಡು ವರ್ಷದ ಹಿಂದೆ ಬಾರ್ಸಿಯಿಂದ ಸೀತಾಫಲ ಸಸಿ ತಂದು ನೆಟ್ಟಿದ್ದರು.
ಎರಡು ವರ್ಷಗಳ ಕಾಲ ಸಾವಯವ ಕೃಷಿಯಿಂದ ಡ್ರಿಪ್ ಮೂಲಕ ನೀರುಣಿಸಿದ್ದರು. ಈಗ ಚಾಟ್ನಿಗೆ ಮಾಡಿಸಿದ್ದು, 4 ಎಕರೆ ಭೂಮಿಯಲ್ಲಿ ಫಲವತ್ತಾದ ಸಾವಿರಕ್ಕಿಂತ ಹೆಚ್ಚು ಗಿಡಗಳು ಬೆಳೆದು ನಿಂತಿವೆ. ಮೊದಲ ಕಂತಿನಲ್ಲಿ ಲಕ್ಷಾಂತರ ರೂ. ಗಳಿಸಿದ್ದ ಇವರು ಈಗ ಎರಡನೇ ಹಂತದ ಹಣ್ಣು ಕೀಳುತ್ತಿದ್ದಾರೆ. ಈಗಾಗಲೇ ಶೇ.80ರಷ್ಟು ಹಣ್ಣು ತೆಗೆದಿದ್ದು, ಸುಮಾರು 4 ಟನ್‌ನಷ್ಟು ಸೀತಾಫಲ ಹಣ್ಣು ಬಂದಿದೆ. ಇದನ್ನು ಬೆಂಗಳೂರು, ಮೈಸೂರು, ಹೈದ್ರಾಬಾದ್, ವಿಜಯಪುರ ಸೇರಿದಂತೆ ವಿವಿಧೆಡೆ ಮಾರಾಟ ಮಾಡಲಾಗಿದೆ.
ಸದ್ಯ ಬೆಂಗಳೂರು, ಮೈಸೂರಿನಲ್ಲಿ ಸೀತಾಫಲ ಹಣ್ಣಿಗೆ ಹೆಚ್ಚಿನ ಡಿಮ್ಯಾಂಡ್ ಇದ್ದು, ಪ್ರತಿ ಕೆಜಿಗೆ 120 ರಿಂದ 160 ರೂ.ವರೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮದ್ಯವರ್ತಿ ಹಾಗೂ ಸಾರಿಗೆ ವೆಚ್ಚ ತೆಗೆದರೆ ಪ್ರತಿ ಕೆಜಿಗೆ 100ರೂ. ಉಳಿಯುತ್ತದೆ ಎನ್ನುತ್ತಾರೆ ನಿವೃತ್ತ ಶಿಕ್ಷಕನ ಪುತ್ರ ನಾನಾಗೌಡ ಬಿರಾದಾರ.
ಸುಮಾರು 40ವರ್ಷ ಶಿಕ್ಷಕ ವೃತ್ತಿ ಮಾಡಿ ನಿವೃತ್ತಿಯಾದ ಮೇಲೆ ಕಾಶಿರಾಯನಗೌಡ ಬಿರಾದಾರ, ಮನೆಯಲ್ಲಿ ಖಾಲಿ ಕುಳಿತುಕೊಳ್ಳದೇ ಕೃಷಿ ತಜ್ಞರ ಸಲಹೆ ಪಡೆದು ಶೂನ್ಯ(ಕಡಿಮೆ) ಬಂಡವಾಳದಲ್ಲಿ ಸೀತಾಫಲ ಸಸಿ ಒಂದಕ್ಕೆ 60 ರಿಂದ 70ರೂ. ಖರ್ಚು ಮಾಡಿದ್ದು ಬಿಟ್ಟರೆ, ಗೊಬ್ಬರ, ಔಷಧಿ ಇಲ್ದೇ ತೋಟದ ಮನೆಯಲ್ಲಿ ಹೈನುಗಾರಿಕೆ ಮಾಡಿ, ಅದೇ ಗೊಬ್ಬರದ ಸಾವಯವ ಔಷಧಿ ಬಳಸಿ ಸೀತಾಫಲ ಹಣ್ಣುಗಳನ್ನು ಬೆಳೆದಿದ್ದಾರೆ.
ಹೆಗಡಿಹಾಳ ಗ್ರಾಮದಲ್ಲಿ ಶೂನ್ಯ ಬಂಡವಾಳದಲ್ಲಿ ಸೀತಾಫಲ ಹಣ್ಣು ಬೆಳೆದು ಯಶಸ್ವಿಯಾದ ಬಿರಾದಾರ ಅವರ ತೋಟಕ್ಕೆ ಕೃಷಿ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಬಂದು ನೋಡಿಕೊಂಡು ಅವರೂ ಸಹ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೀತಾಫಲ ಬೆಳೆಯುತ್ತಿದ್ದಾರೆ. ದ್ರಾಕ್ಷಿ, ಲಿಂಬೆ ಬೆಳೆ ಬೆಳೆದು ಅಕಾಲಿಕ ಮಳೆ, ಬರಗಾಲದಿಂದ ಹಲವು ವರ್ಷಗಳಿಂದ ಬೆಳೆ ಕೈಗೆಟುಕದೇ ನಷ್ಟ ಅನುಭವಿಸುತ್ತಿದ್ದರು. ಈಗ ಸೀತಾಫಲ ಬೆಳೆಯತ್ತ ಆಕರ್ಷಿತರಾಗಿದ್ದೇವೆ. ನಾವು ಸಹ ನಮ್ಮ ತೋಟದಲ್ಲಿ ಸೀತಾಫಲ ಹಣ್ಣು ಬೆಳೆ ಬೆಳೆಯುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ರೈತರು.
ಒಮ್ಮೆ ಸೀತಾಫಲ ಹಣ್ಣಿನ ಗಿಡ ಬೆಳೆದು ನಿಂತರೆ ಸಾಕು ಪ್ರತಿ ವರ್ಷ ಚಾಟ್ನಿ ಮಾಡಿ ಲಾಭಗಳಿಸಬಹುದು ಎನ್ನುವುದನ್ನು ನಿವೃತ್ತ ಶಿಕ್ಷಕರೊಬ್ಬರು ತೋರಿಸಿಕೊಟ್ಟಿದ್ದಾರೆ. ಹೆಚ್ಚು ನೀರಿನ ಅವಶ್ಯಕತೆಯೋ ಈ ಗಿಡಗಳಿಗೆ ಬೇಕಿಲ್ಲ, ಈ ಜಮೀನಿಗೆ ಸರ್ಕಾರಿ ಗೊಬ್ಬರ, ಔಷಧಿ ಸಿಂಪಡಿಸದೇ ಕೇವಲ ಸಾವಯವ ಹೈನುಗಾರಿಕೆ ಮೂಲಕ ದೊರೆಯುವ ಗೊಬ್ಬರ, ತಿಪ್ಪೆ ಗುಂಡಿಯ ಕಸ ಬಳಸಿದರೆ ಒಳ್ಳೆಯ ಲಾಭ ಪಡೆಯಬಹುದು ಎನ್ನುವದನ್ನು ಬಿರಾದಾರ ಕುಟುಂಬ ತೋರಿಸುವ ಮೂಲಕ ಇತರ ರೈತರಿಗೆ ಮಾರ್ಗದರ್ಶಕರಾಗಿದ್ದಾರೆ.
ಇದನ್ನೂ ಓದಿ: ಅಂಗ ವೈಫಲ್ಯವಿದ್ದರೂ ಕೃಷಿಯಲ್ಲಿ ನಿಪುಣ: ಕಲಬುರಗಿ ವಿಶೇಷಚೇತನನ ಯಶೋಗಾಥೆ