ವಿಜಯಪುರ: ಜಿಲ್ಲೆಯ ಡೋಣಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ನೂರಾರು ಕುರಿ ಹಾಗೂ ಮೂವರು ಕುರಿಗಾಹಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ತಾಳಿಕೋಟೆ ತಾಲೂಕಿನ ಮಿಣಜಗಿ ಬಳಿಯ ಡೋಣಿ ನದಿಗೆ ರಾತ್ರಿ ಏಕಾಏಕಿ ಪ್ರವಾಹ ಬಂದು ನಡುಗಡ್ಡೆ ಸಂಪರ್ಕ ಕಳೆದುಕೊಂಡಿತ್ತು. ಕುರಿ ಕಾಯಲು ಹೋಗಿದ್ದ ಮೂವರು ಕುರಿಗಾಹಿಗಳ ಜೊತೆ ನೂರಾರು ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದವು. ರಾತ್ರಿ ರಕ್ಷಿಸಲು ತಾಲೂಕು ಆಡಳಿತ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಯಶಸ್ವಿಯಾಗಲಿಲ್ಲ.
ಇಂದು ಬೆಳಗ್ಗೆ ನಡುಗಡ್ಡೆಗೆ ಅಡ್ಡಲಾಗಿ ಹಗ್ಗ ಕಟ್ಟಿ ಎಲ್ಲಾ ಕುರಿಗಳು ಹಾಗೂ ಕುರಿಗಾಹಿಗಳನ್ನು ರಕ್ಷಣೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ನೂರಾರು ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಭಾಗವಹಿಸಿದ್ದರು.