ಮದ್ದೇಬಿಹಾಳ: ತಾಲ್ಲೂಕಿನ ಹಡಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎನ್.ಎ ಪ್ಲಾಟ್‌ಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಬಾರದು. ಇದರಿಂದ ಪಂಚಾಯತಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಹಡಲಗೇರಿ ಗ್ರಾ.ಪಂನ ಜನಪ್ರತಿನಿಧಿಗಳು ತಹಸೀಲ್ದಾರ್, ಮುಖ್ಯಾಧಿಕಾರಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
![appeal letter](https://etvbharatimages.akamaized.net/etvbharat/prod-images/8813845_muddee.jpg)
ಪಟ್ಟಣದ ತಹಸೀಲ್ದಾರ್ ಕಛೇರಿಗೆ ಆಗಮಿಸಿದ್ದ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಗ್ರೇಡ್-2 ತಹಸೀಲ್ದಾರ್ ಡಿ.ಜಿ.ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರಾದ ಯಲ್ಲಪ್ಪ ಚಲವಾದಿ, ಇನ್ನೂ ಹೆಚ್ಚಿನ ವಿಶೇಷ ಅನುದಾನವನ್ನು ಸರ್ಕಾರದಿಂದ ಪಂಚಾಯತಿಗಳಿಗೆ ನೀಡಿ ಅಭಿವೃದ್ಧಿ ಮಾಡಬೇಕು. ಪಂಚಾಯಿತಿ ವ್ಯಾಪ್ತಿಗೆ ಬರುವ ಎನ್.ಎ ಪ್ಲಾಟ್‌ಗಳು ಈಗಾಗಲೇ ನಮೂನೆ 9 ( ನಿಯಮ 28(1)ರ) ಪ್ರಕಾರ ನಮೂದು ಇದ್ದು ,ಪ್ಲಾಟ್‌ಗಳನ್ನು ಹಡಲಗೇರಿ ಪಂಚಾಯತ್ ವ್ಯಾಪ್ತಿಯಿಂದಲೇ ಅಭಿವೃದ್ಧಿಪಡಿಸಬೇಕು ಮತ್ತು ಯಾವುದೇ ಕಾರಣಕ್ಕೂ ಸದರಿ ಪಂಚಾಯತಿ ವ್ಯಾಪ್ತಿಯ ಬರುವಂತಹ ಎನ್ . ಎ.ಪ್ಲಾಟ್ ಗಳು ಪುರಸಭೆಗೆ ವ್ಯಾಪ್ತಿಗೆ ಸೇರಿಸಿಕೂಳ್ಳಬಾರದು ಎಂದು ಹೇಳಿದರು.
ಒಂದು ವೇಳೆ ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಯತ್ನಿಸಿದ್ದಲ್ಲಿ ಹಡಲಗೇರಿ ಪಂಚಾಯತಿ ಮತ್ತು ಗ್ರಾಮಸ್ಥರ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ಪ್ರತ್ಯೇಕವಾಗಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ,ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಹಡಲಗೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಣಮಂತ ತಳ್ಳಿಕೇರಿ, ಶಿವಪುತ್ರ ಹರಿಂದ್ರಾಳ,ಯಲ್ಲಪ್ಪ ಚಲವಾದಿ ಗ್ರಾಮಸ್ಥರಾದ ಶಿವಪ್ಪ ಮುದ್ನಾಳ ಸೇರಿದಂತೆ ಇತರರು ಇದ್ದರು.