ಮುದ್ದೇಬಿಹಾಳ : ಅಧಿಕಾರಿಗಳು ಅಧಿಕಾರಸ್ಥರ ರಬ್ಬರ್ ಸ್ಟಾಂಪ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧ ಮಾತನಾಡಿದರು ಎಂಬ ಒಂದೇ ಕಾರಣ ಇಟ್ಟುಕೊಂಡು ಹೋರಾಟಗಾರನ ಧ್ವನಿ ಅಡಗಿಸಲು ಅಧಿಕಾರಿಗಳನ್ನು ಛೂ ಬಿಟ್ಟು ಪ್ರಕರಣ ದಾಖಲಿಸುವ ಪ್ರವೃತ್ತಿ ಸರಿಯಲ್ಲ. ಶಾಸಕ ನಡಹಳ್ಳಿ ಕೀಳು ಮಟ್ಟದ ರಾಜಕಾರಣ ಮಾಡುವುದನ್ನು ಬಿಡಲಿ. ಇಂತಹವರು ಪ್ರಜಾಪ್ರಭುತ್ವದ ನೈಜ ಮೌಲ್ಯಗಳನ್ನು ನಾಶ ಮಾಡುತ್ತಿದ್ದಾರೆ. ಗ್ರಾಮದೊಳಗೆ ಮಳೆ ನೀರು ಹೋಗದಂತೆ ತಡೆಯಲಾಗದೆ ಪ್ರಶ್ನೆ ಮಾಡಿದವರ ವಿರುದ್ಧವೇ ದೂರು ದಾಖಲಿಸಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಮೀತಿ ಮೀರಿದ ಉತ್ಸಾಹದಿಂದ ಶಾಸಕರ ಆಜ್ಞಾನುವರ್ತಿಯಂತೆ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಸಂವಿಧಾನದ ಕಾನೂನುಗಳನ್ನು ಪಾಲಿಸುತ್ತಿಲ್ಲ. ಹೋರಾಟಗಾರನೊಬ್ಬನ ಮಾನಸಿಕ ಸ್ಥೈರ್ಯ ಉಡುಗಿಸುವಂತಹ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ವಿ.ಎಸ್.ಸಾಲಿಮಠ, ಸುನೀಲ ಕುಮಾರ ಹೆಬ್ಬೆ, ಸೋಮನಾಥ ಇದ್ದರು.