ಮುದ್ದೇಬಿಹಾಳ(ವಿಜಯಪುರ): ಇಂದು ವರಮಹಾಲಕ್ಷ್ಮೀ ಪೂಜೆ ಹಿನ್ನೆಲೆ ನಗರದಲ್ಲಿ ತರಹೇವಾರಿ ಹೂವುಗಳ ಮಾರಾಟ ಭರ್ಜರಿಯಾಗಿ ನಡೆಯಿತು.
ರೈತರು ತಾವು ಬೆಳೆದಿದ್ದ ಬಾಳೆಕಂಬ, ಅಲಂಕಾರಿಕ ಹೂವುಗಳು, ಪೂಜೆಗೆ ಬಳಸುವ ಸೇವಂತಿ, ಮಲ್ಲಿಗೆ, ಕಾಕಡಾ, ಗುಲಾಬಿ ಹೂವುಗಳನ್ನು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾರಾಟ ಮಾಡಿದರು.
ಮಾವಿನ ಎಲೆ ಮತ್ತು ಹಣ್ಣುಗಳ ಖರೀದಿಯೂ ಜೋರಾಗೇ ನಡೆಯಿತು. ಕೊರೊನಾ ಹಿನ್ನೆಲೆ ಮಾರಾಟಗಾರರು ಮತ್ತು ಖರೀದಿದಾರರ ಸಂಖ್ಯೆ ಕಡಿಮೆ ಇದ್ದರೂ ಹಣ್ಣು, ಹೂವು, ತರಕಾರಿ ಬೆಲೆ ದುಪ್ಪಟ್ಟಾಗಿತ್ತು.
ಕೊರೊನಾ ಹಿನ್ನೆಲೆ ನೆಲ ಕಚ್ಚಿದ್ದ ಹೂವುಗಳ ಬೆಲೆ ಇಂದು ಗಗನಕ್ಕೇರಿತ್ತು. ಸಾಮಾನ್ಯವಾಗಿ ಕೆಜಿ ಗೆ 500 ರಂತೆ ಮಾರಾಟವಾಗುತ್ತಿದ್ದ ಕನಕಾಂಬರ ಪ್ರತಿ ಕೆಜಿ ಗೆ 2000 ದಂತೆ ಮಾರಾಟ ಮಾಡಲಾಯಿತು. ಹಾಗೇ ಗುಲಾಬಿ ಒಂದು ಕೆಜಿ ಗೆ 200, ಸೇವಂತಿ 200, ಕಾಕಡಾ 600ಕ್ಕೆ ಮಾರಾಟವಾಗುತ್ತಿದ್ದು, ಜನ ಸಂಕಷ್ಟದ ಸಮಯದಲ್ಲೂ ಹಬ್ಬ ಮಾಡಲು ಮುಂದಾಗಿದ್ದಾರೆ. ಹೂವು ಬೆಳೆದ ರೈತರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿದಂತಿದೆ.