ವಿಜಯಪುರ: ನಗರದ ರಾಜಗುರು ಇಂಡಸ್ಟ್ರೀಸ್ ಗೋದಾಮಿನಲ್ಲಿ ಫುಡ್ ಪ್ರೊಸೆಸಿಂಗ್ ಯುನಿಟ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಮೆಕ್ಕೆಜೋಳದ ಚೀಲಗಳು ಸುಮಾರು 11 ಕಾರ್ಮಿಕರ ಮೇಲೆ ಕುಸಿದಿದ್ದವು. ದುರಂತದಲ್ಲಿ ಸಾವನ್ನಪ್ಪಿದ್ದ ಏಳು ಕಾರ್ಮಿಕರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ರಾಜ್ಯ ವಿಪತ್ತು ಸ್ಪಂದನಾ ಪಡೆಯಿಂದ ಸತತ ಹದಿನೇಳು ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಪೂರ್ಣಗೊಂಡಿದೆ.
ವಿಜಯಪುರ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಇಂಡಸ್ಟ್ರೀಸ್ನಲ್ಲಿ ಮೆಕ್ಕೆಜೋಳ ಸಂಸ್ಕರಿಸುವ ಈ ಘಟಕದಲ್ಲಿ ನಿತ್ಯ ನೂರಾರು ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದರು. ಅದರಲ್ಲಿ ಬಹುತೇಕರು ಬಿಹಾರದಿಂದ ವಲಸೆ ಬಂದು ಸೇರಿಕೊಂಡ ಕಾರ್ಮಿಕರಾಗಿದ್ದಾರೆ. ನಿನ್ನೆ (ಸೋಮವಾರ) ಸಾಯಂಕಾಲದ ವೇಳೆ ಈ ಘಟಕದಲ್ಲಿ ಏಕಾಏಕಿ ತಾಂತ್ರಿಕ ತೊಂದರೆ ಉಂಟಾಗಿದೆ. ಇದರಿಂದ ಮೆಕ್ಕೆಜೋಳ ಸಂಸ್ಕರಿಸುವ ಘಟಕ ಕುಸಿದು ಬಿದ್ದಿದೆ. ಅದರಡಿ ಕನಿಷ್ಠ ಹನ್ನೊಂದು ಜನ ಕಾರ್ಮಿಕರು ಸಿಲುಕಿಕೊಂಡಿದ್ದರು.
ವಿಷಯ ತಿಳಿದ ಜಿಲ್ಲಾಡಳಿತ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ನೆರವಿನೊಂದಿಗೆ ಪ್ರಾರಂಭದಲ್ಲಿಯೇ ಮೂವರು ಕಾರ್ಮಿಕರನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಸ್ವಲ್ಪ ಸಮಯದ ನಂತರ, ಮೊತ್ತೊಬ್ಬ ಕಾರ್ಮಿಕನನ್ನು ರಕ್ಷಿಸಲಾಗಿತ್ತು. ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ ವೇಳೆಗೆ ಈ ರಕ್ಷಣಾ ಕಾರ್ಯಾಚರಣೆಗೆ ರಾಜ್ಯ ವಿಪತ್ತು ಸ್ಪಂದನಾ ಪಡೆಯಿಂದ ಸೇರಿ ವಿವಿಧ ತಂಡಗಳು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದವು. ತಡರಾತ್ರಿ ಓರ್ವ ಕಾರ್ಮಿಕನ ಶವ ಹೊರತೆಗೆಯಲಾಯಿತು.
ಈ ಸಂದರ್ಭದಲ್ಲಿ ಉಳಿದ ನೂರಾರು ಕಾರ್ಮಿಕರು ನ್ಯಾಯ ಹಾಗೂ ಸೂಕ್ತ ಪರಿಹಾರ ನೀಡುವಂತೆ ಕೋರಿ ಪ್ರತಿಭಟನೆ ನಡೆಸಿದ್ದರಿಂದಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಬೆಳಗಾವಿ ಅಧಿವೇಶನಕ್ಕೆ ಹೋಗಿದ್ದರು. ಬಳಿಕ ಬೆಳಗಾವಿಯಿಂದ ವಿಜಯಪುರಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಈ ಆಶ್ವಾಸನೆ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆ ಹಿಂತೆಗೆದುಕೊಂಡರು. ಬಳಿಕ ರಕ್ಷಣಾ ಕಾರ್ಯಾಚರಣೆ ಮುಂದುವರಿಯಿತು.
ಇಂದು (ಮಂಗಳವಾರ) ಬೆಳಗಿನ ಜಾವ ಪುಣೆಯಿಂದ ಬಂದ ಎನ್‌ಡಿಆರ್‌ಎಫ್ ತಂಡ ನಂತರ ರಕ್ಷಣಾ ಕಾರ್ಯಾಚರಣೆ ವೇಗ ಪಡೆದುಕೊಂಡಿತು. ಘಟಕದಡಿ ಸಿಲುಕಿ ಮೃತಪಟ್ಟ ಪಟ್ಟಿದ್ದ ಕಾರ್ಮಿಕರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಯಿತು. ಮೃತ ಕಾರ್ಮಿಕರ ಸಹೋದ್ಯೋಗಿಗಳ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ರಕ್ಷಣಾ ಸಿಬ್ಬಂದಿಯಿಂದ ನಡೆದ ಬಹುತೇಕ ಕಾರ್ಯಾಚರಣೆ ಪೂರ್ಣಗೊಂಡಿದೆ.
ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಿಷ್ಟು: ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ರಿಷಿಕೇಶ್ ಸೋನವಾನೆ ಅವರು, ರಾಜಗುರು ಫುಡ್ ಮಾಲೀಕ, ಮೇಲ್ವಿಚಾರಕನ ವಿರುದ್ಧ ಕೇಸ್ ದಾಖಲು ಮಾಡುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾಹಿತಿ: ಮೃತಪಟ್ಟ ಬಿಹಾರ ಮೂಲದ ಏಳು ಕಾರ್ಮಿಕರಾದ ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ (29), ಸಂಬೂ ಮುಖಿಯಾ (26), ರಾಮ್ ಬಾಲಕ್ (38), ಲೋಖಿ ಜಾಧವ್ (56), ಕಿಶನಕುಮಾರ (20), ದಾಲನಚಂದ ಮುಖಿನ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಂದ ಬಳಿಕ, ಮೃತದೇಹಗಳನ್ನು ಅವರು ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಈ ಘಟನೆಗೆ ಕಾರಣವಾದವರ ವಿರುದ್ಧ ಕ್ರಮ ಮತ್ತು ಸರಕಾರದ ಸೂಚನೆಯಂತೆ ಮೃತ ಕಾರ್ಮಿಕರ ಅವಲಂಬಿತರಿಗೆ ಸೂಕ್ತ ನ್ಯಾಯ ಹಾಗೂ ಪರಿಹಾರ ಒದಗಿಸಿಕೊಡಲಾಗುವುದು'' ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಭರವಸೆ ನೀಡಿದರು.
ಮಾಲೀಕರಿಂದ ಪರಿಹಾರ ಘೋಷಣೆ: ರಾಜಗುರು ಫುಡ್ಸ್ ಮಾಲೀಕ ಕಿಶೋರಕುಮಾರ ಜೈನ್ ಮೃತ ಕಾರ್ಮಿಕರಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳು ಕಾರ್ಮಿಕರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದರ ಹೊರತಾಗಿ ಸರ್ಕಾರದಿಂದಲೂ ಮೃತ ಕಾರ್ಮಿಕರಿಗೆ, ಗಾಯಗೊಂಡ ಕಾರ್ಮಿಕರಿಗೆ ಪರಿಹಾರ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಕಾರಣ ಅರಿಯಲು ಇಮೇಲ್ ಸಾರಾಂಶದ ವಿಶ್ಲೇಷಣೆ