ವಿಜಯಪುರ: ಮೋದಿ ವಿಶ್ವ ಗುರು ಅಲ್ಲ ಪುಕ್ಕಲು ಗುರು ಎನ್ನುವ ಮಾಜಿ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪಾಕಿಸ್ತಾನಕ್ಕೆ ಕೇಳಿ ಮೋದಿ ಯಾವ ಗುರು ಅಂತ ಹೇಳ್ತಾರೆ ಎಂದು ಮಾತಿನಲ್ಲಿಯೇ ತಿವಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಆಯ್ತು, ಅದು ಗೊತ್ತಿತ್ತಾ ಅವರಿಗೆ ? ಅದು ಆದ ಮೇಲೆ ಒಂದು ಹೆಜ್ಜೆ ಆದ್ರೂ ಅವರು ಮುಂದೆ ಬಂದಿದ್ದಾರಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಪುಕ್ಕಲು ಯಾರು ಅನ್ನೋದು ಇಡೀ ವಿಶ್ವ ನೋಡುತ್ತೆ ಎಂದು ಟಾಂಗ್ ಕೊಟ್ಟರು.
ಮೋದಿ ಪ್ರಧಾನಿ ಆಗುವ ಮುಂಚೆ ಇಡೀ ವಿಶ್ವ ಪಾಕಿಸ್ತಾನದ ಜೊತೆ ಇತ್ತು. ಭಾರತ ಒಬ್ಬಂಟಿಯಾಗಿತ್ತು, ಇಂದು ಎಲ್ಲರೊಂದಿಗೆ ಸ್ನೇಹ ಬೆಳೆಸಿ ಶಸ್ತ್ರಾಸ್ತ್ರ ಜಾಸ್ತಿ ಮಾಡಿಕೊಂಡು ಬಜೆಟ್ ನಲ್ಲಿ ಹೆಚ್ಚಿನ ಹಣವನ್ನು ಅದಕ್ಕೆ ಮೀಸಲು ಇಟ್ಟಿದ್ದಾರೆ. ಇಂದು ಇಡೀ ವಿಶ್ವ ಭಾರತದೊಂದಿಗೆ ಇದೆ, ಪಾಕಿಸ್ತಾನ ಒಬ್ಬಂಟಿಯಾಗಿದೆ. ಪಾಕಿಸ್ತಾನವೇ ಮೋದಿಗೆ ಹೆದರಬೇಕಾದರೇ ಇನ್ನು ಸಿದ್ದರಾಮಯ್ಯ ಯಾವ ಲೆಕ್ಕ ಎಂದರು.
ರಾಹುಲ್ ಹೊಗಳಿದ ಈಶ್ವರಪ್ಪ: ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಒಂದು ವಿಷಯ ತಮಗೆ ಹೆಚ್ಚು ಮೆಚ್ಚುಗೆ ತಂದುಕೊಟ್ಟಿತು. ಅದು ಯಾತ್ರೆಯಲ್ಲಿ ಸೋನಿಯಾಗಾಂಧಿ ಶೂ ಲೇಸ್ ಬಿಚ್ಚಿದಾಗ ಅವರ ಮಗ ರಾಹುಲ್ ಗಾಂಧಿ ಕೆಳಗೆ ಕುಳಿತು ಲೇಸ್ ಹಾಕಿದ್ದನನ್ನು ಇಡೀ ದೇಶವೇ ನೋಡಿತು. ಇದು ನನಗೆ ಹೆಚ್ಚು ಮೆಚ್ಚುಗೆ ತಂದಿದೆ. ಅದು ಬಿಟ್ಟರೆ ಭಾರತ ಜೋಡೋದಿಂದ ಮತ್ತೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ರಾಹುಲ್ ಗಾಂಧಿ ನಡುವಳಿಕೆಯನ್ನು ಈಶ್ವರಪ್ಪ ಕೊಂಡಾಡುವ ಮೂಲಕ ಅಚ್ಚರಿ ಮೂಡಿಸಿದರು.
ಇದನ್ನೂ ಓದಿ:ಮಂಡ್ಯದಲ್ಲಿ ಭಾರತ್ ಜೋಡೋ: ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ
ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಕೇವಲ ಭರವಸೆ ನೀಡುತ್ತಲೇ ಅಧಿಜಾರ ಅನುಭವಿಸಿತ್ತು, ಈಗ ಅಲ್ಪಸಂಖ್ಯಾತರಿಗೂ ಕಾಂಗ್ರೆಸ್ ರಾಜಕಾರಣ ಗೊತ್ತಾಗಿದೆ. ಹೀಗಾಗಿ ಅವರು ಸಹ ಬಿಜೆಪಿಯತ್ತ ಒಲವು ತೋರಿಸುತ್ತಿದ್ದು, ಇದು ಕಾಂಗ್ರೆಸ್ ನಿರ್ನಾಮ್ ವಾಗಿರುವ ಸಂಕೇತವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಲ್ಲಿ ಭಿನ್ನಮತ ಹೆಚ್ಚಾಗಿದೆ ಅದನ್ನು ಹೇಳುತ್ತಿದ್ದರೆ, ಎ.ಬಿ.ಸಿ ಎಂದು ಪಟ್ಟಿ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಈಗಾಗಲೇ ಎರಡು ಗುಂಪುಗಳಾಗಿವೆ. ಆದರೆ ಸಿದ್ದರಾಮಯ್ಯ ನಮ್ಮಲ್ಲಿ ಎಲ್ಲಿ ಗುಂಪು ಎನ್ನುತ್ತಾರೆ, ಹಿಂದೆ ಸಿದ್ದರಾಮಯ್ಯ ಸಿಎಂ ಅಂಥ ಬಿಂಬಿಸಿಕೊಳ್ಳುತ್ತಿದ್ದಾರೆ. ಇತ್ತ ಡಿ.ಕೆ.ಶಿವಕುಮಾರ ಹೇಳುತ್ತಾರೆ, ಒಕ್ಕಲಿಗರು ನನ್ನ ಬೆನ್ನ ಹಿಂದೆ ನಿಲ್ಲಿ ಎಸ್.ಎಂ. ಕೃಷ್ಣ ಆದ ಮೇಲೆ ನಮ್ಮವರಿಗೆ ಸಿಎಂ ಸ್ಥಾನದ ಅವಕಾಶವಿದೆ ಎನ್ನುತ್ತಾರೆ. ಇಷ್ಟು ಜಾತಿವಾದಿ ಪಕ್ಷ ಹಿಂದೆ ಎಂದು ಆಗಿರಲಿಲ್ಲ , ಇಂಥ ಜಾತಿವಾದಿಯಿಂದ ಗುಂಪುಗಾರಿಕೆ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್ ಗೆ ಭವಿಷ್ಯವಿಲ್ಲ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಬೇಗ ಮಂತ್ರಿಯಾಗುತ್ತೇನೆ: ಸದ್ಯ ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ಮತ್ತೆ ಸಚಿವರಾಗುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನು ಹೈ ಕಮಾಂಡ್ ನಿರ್ಧರಿಸುತ್ತದೆ. ಸಿಎಂ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಜತೆ ಮಾತುಕತೆ ನಡೆಸಿದ್ದು, ಖಂಡಿತ ಮಂತ್ರಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.