ಮುದ್ದೇಬಿಹಾಳ : ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯಿತಿಯ ಘಾಳಪೂಜಿ ಗ್ರಾಮದ ಮತ ಎಣಿಕೆ ವೇಳೆ ಏಜೆಂಟ್ ಓರ್ವ ಮತಗಳ ಮರು ಎಣಿಕೆ ಮಾಡುವಂತೆ ಚುನಾವಣಾಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದ ಘಟನೆ ಕಳೆದ ರಾತ್ರಿ ನಡೆದಿದೆ.
ಘಾಳಪೂಜಿ ಗ್ರಾಮದಲ್ಲಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ಎಣಿಕೆ ನಡೆಯುವ ವೇಳೆ ಅಭ್ಯರ್ಥಿಗಳ ಏಜೆಂಟ್ಗಳು ತಕರಾರು ತೆಗೆದು, ನಮಗೆ ಮತ್ತು ಎದುರಾಳಿ ಅಭ್ಯರ್ಥಿಗಳಿಗೆ ಸಮವಾದ ಮತಗಳು ಬಂದಿವೆ. ಹಾಗಾಗಿ, ಮರು ಎಣಿಕೆ ಮಾಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳು ಮತ್ತು ಏಜೆಂಟರ ನಡುವೆ ಪರಸ್ಪರ ವಾಗ್ವಾದ ನಡೆಯಿತು.
ಸ್ಥಳಕ್ಕೆ ತಹಶೀಲ್ದಾರ್ ಎಮ್.ಎಸ್.ಅರಕೇರಿ, ಜಿಲ್ಲಾ ನೋಡಲ್ ಅಧಿಕಾರಿ ಸಿದ್ಧರಾಮ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸಿ ಎಣಿಕೆ ಸಂದರ್ಭದಲ್ಲಿ ಸರಿಯಾಗಿ ಮಾಹಿತಿ ದಾಖಲಿಸಿಕೊಳ್ಳಬೇಕು. ಅದು ಬಿಟ್ಟು ಫಲಿತಾಂಶ ಘೋಷಣೆ ವೇಳೆ ತಕರಾರು ತೆಗೆದರೆ ಹೇಗೆ? ಎಂದು ಅವರ ವಾದವನ್ನು ಕೈಬಿಟ್ಟು ಫಲಿತಾಂಶ ಪ್ರಕಟಿಸಲು ಚುನಾವಣಾಧಿಕಾರಿಗೆ ಸೂಚಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಚುನಾವಣಾಧಿಕಾರಿ ದೊಡಮನಿ ಅವರು, ಇನ್ನೊಮ್ಮೆ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.