ವಿಜಯಪುರ: ಅತಿಥಿ ಉಪನ್ಯಾಸಕರ ಬಾಕಿ ವೇತನ ಬಿಡುಗಡೆ ಹಾಗೂ ವಿಶೇಷ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು/ ಅತಿಥಿ ಶಿಕ್ಷಕರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಾಜ್ಯದಲ್ಲಿ ಕಡಿಮೆ ಸಂಬಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ರಾಜ್ಯ ಸರ್ಕಾರ ಕಾಲ ಕಾಲಕ್ಕೆ ವೇತನ ನೀಡುತ್ತಿಲ್ಲ. ಇತ್ತ ಕೊರೊನಾ ವೈರಸ್ ಭೀತಿ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ಬೀಗ ಹಾಕಿದರೂ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪಾಠ ಮಾಡಿದ್ದಾರೆ. ಆದರೂ ಅತಿಥಿ ಶಿಕ್ಷಕರಿಗೆ ಸರ್ಕಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರು ಕಿಡಿಕಾರಿದರು.
ಹೊಸದಾಗಿ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿಕೊಳ್ಳದೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರನ್ನೇ ಕಾಯಂಗೊಳಿಸಿ ವಿಶೇಷ ಪರಿಹಾರ ಪ್ಯಾಕೇಜ್ ಹಾಗೂ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.