ವಿಜಯಪುರ: ಮಾತೃಪೂರ್ಣ ಯೋಜನೆಯಡಿ ಮೊಟ್ಟೆ ವಿತರಿಸುವ ಟೆಂಡರ್ನಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಅವರು ಅಕ್ಕಮಹಾದೇವಿ ವಿವಿಯಲ್ಲಿ ಧ್ವಜಾರೋಹಣ ಮಾಡುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾದ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಅಕ್ಕಮಹಾದೇವಿ ವಿಶ್ವ ವಿದ್ಯಾನಿಲಯಕ್ಕೆ ಧ್ವಜಾರೋಹಣ ನೆರವೇರಿಸಲು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಆಗಮಿಸುತ್ತಿದ್ದಂತೆ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ವೇದಿಕೆಗೆ ನುಗ್ಗಿ ಭ್ರಷ್ಟರಿಗೆ ಧ್ವಜಾರೋಹಣದ ಅವಕಾಶ ಮಾಡಿ ಕೊಡಬಾರದು ಎಂದು ಜೊಲ್ಲೆ ವಿರುದ್ಧ ಘೊಷಣೆಗಳನ್ನು ಕೂಗಿದರು.
ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದರು. ಇತ್ತ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಶಶಿಕಲಾ ಜೊಲ್ಲೆ ಧ್ವಜಾರೋಹಣ ಕಾರ್ಯ ನೆರವೇರಿಸಿ, ನೆರೆದ ಜನತೆಗೆ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಇದೇ ವೇಳೆ ತಮ್ಮ ವಿರುದ್ಧ ಆರೋಪ ಮಾಡಿದವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, ನನಗೂ ವಿಶೇಷಚೇತನ ಮಗ ಇದ್ದಾನೆ. ಒಬ್ಬ ತಾಯಿಯಾಗಿ ಆತನ ಸಂಕಷ್ಟ ನನಗೆ ಗೊತ್ತಿದೆ. ಉನ್ನತ ಸ್ಥಾನದಲ್ಲಿರುವ ಮಹಿಳೆ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಂಸದ ರಮೇಶ ಜಿಗಜಿಣಗಿ ಮುಂದಾದವರು ಉಪಸ್ಥಿತರಿದ್ದರು.