ವಿಜಯಪುರ : ರಾಜ್ಯ ಸರ್ಕಾರ ಜಾರಿ ಮಾಡ್ತಿರುವ ಹೊಸ ಕಾನೂನು ರೈತರಿಗೆ ಮಾರಕವಾಗುತ್ತದೆ ಎಂದು ಹಲವು ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗುಮ್ಮಟನಗರಿಯಲ್ಲಿ ಪ್ರತಿಭಟನೆ ನಡೆಸಿದವು.
ವಿಜಯಪುರದ ಸಿದ್ದೇಶ್ವರ ಮಂದಿರದಿಂದ ಮೆರವಣಿಗೆ, ಪ್ರತಿಭಟನಾ ರ್ಯಾಲಿಗಳು ಆರಂಭವಾದವು. ಕೆಲವು ರೈತ ಸಂಘಟನೆಗಳು ಜೋಳದ ದಂಟು ಹಿಡಿದು, ಎತ್ತಿನ ಬಂಡಿ ಹೂಡುವ ಮೂಲಕ ಪ್ರತಿಭಟಿಸಿದರು. ಸರ್ಕಾರ ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿದೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಹರಿಹಾಯ್ದರು.
ಇತ್ತ ಮುಂಜಾಗ್ರತಾ ಕ್ರಮವಾಗಿ ನಗರದ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ತಕ್ಷಣವೇ ಅಂಗೀಕಾರ ಮಾಡ್ತಿರುವ ಕಾನೂನುಗಳನ್ನು ಕೈಬಿಡ್ಬೇಕು, ಇಲ್ಲವಾದ್ರೆ ಹೋರಾಟ ಮುಂದುವರೆಸುತ್ತೇವೆಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದರು.
ಪ್ರತಿಭಟನಾ ಆರಂಭದ ಹೊತ್ತಿಗೆ ನಗರ ಎಲ್‌ಬಿಎಸ್ ಮಾರುಕಟ್ಟೆ ರಸ್ತೆ, ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕೆಲ ಕಾಲ ಪೊಲೀಸರು ಸಾರ್ವಜನಿಕ ಸಂಚಾರಕ್ಕೆ ತಡೆವೂಡ್ಡಿದರು. ಇಂದಿನ ಬಂದ್‌ಗೆ ಮಹಿಳಾ ಸಂಘಟನೆಗಳು ಸೇರಿ 15ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.