ವಿಜಯಪುರ: ಖ್ಯಾತ ನಿರೂಪಕಿ ಅನುಶ್ರೀ ಜತೆ ಜನ ಸೆಲ್ಫಿ ತೆಗೆದುಕೊಳ್ಳಲು ನೂಕುನುಗ್ಗಲು ನಡೆಸಿದ್ದು, ನಿರೂಪಕಿಯನ್ನು ಜನರಿಂದ ರಕ್ಷಿಸಲು ಖಾಸಗಿ ಭದ್ರತಾ ಸಿಬ್ಬಂದಿ ಹೈರಾಣಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.
ಕಳೆದ ರಾತ್ರಿ ಪಟ್ಟಣದಲ್ಲಿ ನಡೆದ ಕಲಾಜಾತ್ರೆ ಕಾರ್ಯಕ್ರಮಕ್ಕೆ ನಟ ವಿಜಯರಾಘವೇಂದ್ರ ಜತೆ ನಿರೂಪಕಿ ಅನುಶ್ರೀ ಆಗಮಿಸಿದ್ದರು. ಈ ವೇಳೆ ವೇದಿಕೆಗೆ ನುಗ್ಗಿದ ಯುವಕ, ಯುವತಿಯರು ಅನುಶ್ರೀ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಗಲಿಬಿಲಿಗೊಂಡಿದ್ದ ಅನುಶ್ರೀ ಅವರನ್ನು ರಕ್ಷಿಸಲು ಖಾಸಗಿ ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು. ಅವರನ್ನು ಸುತ್ತುವರೆದು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾಯಿತು. ಇದರಿಂದ ಸೆಲ್ಫಿ ಪ್ರಿಯರು ನಿರಾಸೆಗೊಂಡರು.
ಕನ್ನಡ ಉಳಿವಿಗೆ ಉ.ಕ ಪಾತ್ರ ಮುಖ್ಯ: ಇದೇ ಕಾರ್ಯಕ್ರಮದಲ್ಲಿ ತಮ್ಮ ಹೊಸ ಚಲನಚಿತ್ರ ಮಾಲ್ಗುಡಿ ಡೇಸ್ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ನಟ ವಿಜಯ ರಾಘವೇಂದ್ರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಉತ್ತರ ಕರ್ನಾಟಕದವರಿಂದಲೇ ಇಂದು ಕನ್ನಡ ಭಾಷೆ ಜೀವಂತವಾಗಿ ಉಳಿದಿದೆ ಎಂದು ಉತ್ತರ ಕರ್ನಾಟಕದ ಜನತೆಯ ಕನ್ನಡ ಪ್ರೇಮವನ್ನು ಮುಕ್ತಕಂಠದಿಂದ ಹೊಗಳಿದರು. ನಿರ್ದೇಶಕ ಕಲಂದರ ದೊಡಮನಿ ನೇತೃತ್ವದಲ್ಲಿ ಮುದ್ದೇಬಿಹಾಳದಲ್ಲಿ ಕಲಾಜಾತ್ರೆ ಕಾರ್ಯಕ್ರಮ ಆಯೋಜಿಸಲಾಗಿತ್ತು.