ವಿಜಯಪುರ : ಜಿಲ್ಲೆಯ ಬಿ ಮತ್ತು ಸಿ ದರ್ಜೆಯ ಸರ್ಕಾರದ ಅಧಿಸೂಚಿತ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಮಂಡಳಿ ರಚನೆಗೆ ಗಮನ ನೀಡುವಂತೆ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಧರ್ಮದಾಯ ದತ್ತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿರುವ ಸರ್ಕಾರದ ಅಧಿಸೂಚಿತ ಬಿ ಮತ್ತು ಸಿ ದರ್ಜೆ ದೇವಸ್ಥಾನಗಳಿಗೆ ಈಗಾಗಲೇ ವ್ಯವಸ್ಥಾಪನಾ ಮಂಡಳಿ ರಚನೆಯಾಗಿ ಅವಧಿ ಮುಗಿದಿದ್ದರೆ ಅಂತಹ ವ್ಯವಸ್ಥಾಪನಾ ಮಂಡಳಿ ರಚನೆಗೆ ವಿಶೇಷ ಗಮನ ನೀಡಬೇಕೆಂದು ಸೂಚನೆ ನೀಡಿದರು.
ಅರ್ಚಕರ ಸಮಸ್ಯೆಗಳು, ದೇವಸ್ಥಾನಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸಲು ಆಡಳಿತ ಮಂಡಳಿಗಳ ರಚನೆಯ ಜೊತೆಗೆ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯನ್ನು ಪ್ರತಿ ತಿಂಗಳು ನಡೆಸಲು ಕ್ರಮ ಕೈಗೊಳ್ಳಬೇಕು. ಇದರ ಜತೆ ಅರ್ಚಕರ ಸಮಾವೇಶ ಮಾಡುವ ಕುರಿತು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಸರ್ಕಾರಿ ಅಧೀನದ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಆಸ್ತಿಪಾಸ್ತಿ, ಭೂ ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರದ ಆಸ್ತಿ ಬೇರೆಯವರ ಪಾಲಾಗದಂತೆ ನೋಡಿಕೊಳ್ಳಬೇಕು. ಸಿ ದರ್ಜೆಯ ದೇವಸ್ಥಾನಗಳ ಸಮೀಕ್ಷೆ ನಡೆಸಿ ಆಡಳಿತಾಧಿಕಾರಿ ಇಲ್ಲದ ಕಡೆ ಆಡಳಿತ ಮಂಡಳಿ ರಚಿಸಬೇಕು.
ಈ ಮೂಲಕ ದೇವಸ್ಥಾನಗಳ ಆಸ್ತಿ ಪಾಸ್ತಿ ರಕ್ಷಣೆ ಮಾಡುವಂತೆ ಸಲಹೆ ನೀಡಿದ ಅವರು ಸರ್ಕಾರಿ ದೇವಸ್ಥಾನಗಳಿಗೆ ಬರುವಂತಹ ಕಾಣಿಕೆ ಮತ್ತು ಹುಂಡಿ ದೇವಸ್ಥಾನದ ಅಭಿವೃದ್ಧಿಗೆ ಬಳಸುವಂತಾಗಬೇಕು ಎಂದರು.
ಓದಿ : ಅಣ್ಣನ ಕಾಮಕ್ಕೆ ಗರ್ಭಿಣಿಯಾದ ಒಡ ಹುಟ್ಟಿದ ತಂಗಿ
ವಸತಿ ನಿಲಯ ಸುಧಾರಿಸಿ : ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಮತ್ತು ನಂತರ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯದ ಕೊರತೆ ಆಗದಂತೆ ನಿಗಾ ಇಡಬೇಕು. ಜಿಲ್ಲಾ ಮಟ್ಟದ ಅಧಿಕಾರಿ ಗಳು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸಚಿವ ಕೋಟಾ ಶ್ರೀ ನಿವಾಸ ಹೇಳಿದರು.
ಮುದ್ದೇಬಿಹಾಳದಲ್ಲಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ 2 ಎಕರೆ ಜಮೀನು ಲಭ್ಯವಿರುವ ಬಗ್ಗೆ ಶಾಸಕರು ತಿಳಿಸಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಿಜಯಪುರ ತಾಲೂಕಿನಲ್ಲಿ ವಸತಿ ನಿಲಯಗಳಿಗಾಗಿ ಹೆಚ್ಚಿನ ಅರ್ಜಿಗಳು ಬಂದಿದ್ದು, ಹೆಚ್ಚುವರಿ ವಸತಿ ನಿಲಯಗಳನ್ನು ಗುರುತಿಸಲು ಅಥವಾ ವಾರ್ಷಿಕ ಆಧಾರದ ಮೇಲೆ ಬಾಡಿಗೆ ಕಟ್ಟಡ ಪಡೆಯಲು ವಾರ್ಷಿಕ ಆರ್ಥಿಕ ವ್ಯಯ ಸೇರಿದಂತೆ ಇನ್ನಿತರ ವರದಿಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.