ವಿಜಯಪುರ: ಕೊರೊನಾ ಮಹಾಮಾರಿಯಿಂದ ದೇಶದಲ್ಲಿ ಎಲ್ಲಾ ಉದ್ಯಮಗಳು ನಷ್ಟ ಅನುಭವಿಸುತ್ತಿವೆ. ಆದರೆ ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟ ಸಂಕಷ್ಟಲ್ಲಿದ್ದ ಹಾಲು ಉತ್ಪಾದಕ ರೈತರ ಬೆನ್ನಿಗೆ ನಿಂತಿದ್ದಲ್ಲದೇ ತನ್ನ ಒಕ್ಕೂಟವನ್ನು ಲಾಭದತ್ತ ತೆಗೆದುಕೊಂಡು ಹೋಗಿದೆ.
ಈಗ ಬಂದ ಲಾಭಾಂಶವನ್ನು ಬೋನಸ್ ರೂಪದಲ್ಲಿ ರೈತರಿಗೆ ನೀಡಲು ಸಹ ಮುಂದಾಗಿದೆ. ವಿಜಯಪುರ-ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಕೊರೊನಾ ಭೀತಿ ನಡುವೆಯೂ ಸಹ ಮೂರು ತಿಂಗಳ ಅವಧಿಯಲ್ಲಿ 1.28 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಕೊರೊನಾ ಭೀತಿಯಿಂದ ಕಂಗಾಲಾಗಿದ್ದ ಬಡವರಿಗೆ ಸರ್ಕಾರ ಉಚಿತ ಹಾಲು ವಿತರಿಸಲು ನಿರ್ಧರಿಸಿತ್ತು. ಇದರಂತೆ ವಿಜಯಪುರ ಜಿಲ್ಲೆಯಲ್ಲಿ 25 ಸಾವಿರ ಲೀಟರ್ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 25 ಸಾವಿರ ಲೀಟರ್ ಹಾಲನ್ನು ಕೆಎಂಎಫ್ನಿಂದ ವಿತರಿಸಲಾಗಿತ್ತು.
ಇದರಿಂದ ಒಕ್ಕೂಟ ಸ್ವಲ್ಪ ಚೇತರಿಕೆ ಕಂಡ ಮೇಲೆ ಏಪ್ರಿಲ್ನಲ್ಲಿ 88 ಲಕ್ಷ ರೂ., ಮೇನಲ್ಲಿ 39 ಲಕ್ಷ ರೂ. ಹಾಗೂ ಜೂನ್ನಲ್ಲಿ 40 ಲಕ್ಷ ರೂ. ಮೌಲ್ಯದ ಹಾಲು ಮಾರಾಟವಾಗುವ ಮೂಲಕ ಒಕ್ಕೂಟ ಮತ್ತೊಮ್ಮೆ ಚೇತರಿಕೆ ಕಂಡಿದೆ. ಈ ಮೂಲಕ ಹಾಲು ಉತ್ಪಾದಕ ರೈತರಿಗೂ ಪ್ರತಿ ವಾರ ಬ್ಯಾಂಕ್ ಖಾತೆಗೆ ಅವರ ಹಾಲಿನ ದುಡ್ಡು ಪಾವತಿಸಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಕೊರೊನಾ ಆತಂಕ ಜಿಲ್ಲೆಯಲ್ಲಿ ಆರಂಭಗೊಂಡಾಗ ಎಲ್ಲಾ ಕಡೆ ಲಾಕ್ಡೌನ್ ಆಗಿದ್ದ ಕಾರಣ ಹಾಲು ಮಾರಾಟ ಪ್ರತಿದಿನ 54 ಸಾವಿರಕ್ಕೆ ಕುಸಿತಗೊಂಡಿತ್ತು. ಇದರ ಜತೆ ಪಕ್ಕದ ಮಹಾರಾಷ್ಟ್ರದಿಂದ ಹೆಚ್ಚುವರಿ ಹಾಲು ಶೇಖರಣೆಗೊಂಡು ಒಕ್ಕೂಟ ಹಾಲು ಮಾರಾಟ ಮಾಡದೇ ಹಾಲಿನ ಪುಡಿ ಮಾಡಲು ಬಳಕೆ ಮಾಡಿಕೊಂಡು ಭಾರೀ ನಷ್ಟ ಅನುಭವಿಸಿತ್ತು.
ನಂತರ ಮೇ 1ರಿಂದ ಲಾಕ್ಡೌನ್ ತೆರವಾದ ಬಳಿಕ ದಿನನಿತ್ಯ 77 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರ ಜತೆ 70-75 ಸಾವಿರ ಲೀಟರ್ ದ್ರವ ರೂಪದ ಪಾನೀಯ, ಇನ್ನಿತರ ಸಿಹಿ ತಿಂಡಿ ತಯಾರಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಡಿ.ದಿಕ್ಷೀತ್ ತಿಳಿಸಿದ್ದಾರೆ.
ಈ ಬಾರಿ ಹಾಲು ಒಕ್ಕೂಟಕ್ಕೆ ಬಂದ ಲಾಭಾಂಶದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಬೋನಸ್ ನೀಡಲು ನಿರ್ಧರಿಸಲಾಗಿದೆ. ಅವರಿಗೆ ಹಣ ಬದಲಿಗೆ ಪ್ರತಿ ಲೀಟರ್ಗೆ ಇಂತಿಷ್ಟು ದರ ನಿಗದಿ ಮಾಡಿ ಆರ್ಥಿಕವಾಗಿ ರೈತರನ್ನು ಸಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಜತೆ ರೈತರ ಹೈನುಗಾರಿಕೆ ಬಳಸುವ ಹಸು, ಎಮ್ಮೆಗಳಿಗೆ ಆರೋಗ್ಯ ವಿಮೆ ಸಹ ಮಾಡಿಸಲು ಒಕ್ಕೂಟ ಮುಂದಾಗಿದೆ.