ವಿಜಯಪುರ: ನಿನ್ನೆಯವರೆಗೆ ಸುಮಾರು 59 ಸಾವಿರದಷ್ಟು ಜನ್ರು ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಅದರಲ್ಲಿ ಪ್ರತಿ ಶತ 12ರಷ್ಟು ಜನ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸರ್ಕಾರದ ಜೊತೆಗೆ ಖಾಸಗಿ ಆಸ್ಪತ್ರೆಗಳು ಹಾಗೂ ಸಂಘ ಸಂಸ್ಥೆಗಳು ಕೈ ಜೋಡಿಸಿದ್ದರ ಫಲವಾಗಿ ಇಂದು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಜಿಲ್ಲೆಯಲ್ಲಿ 11 ಖಾಸಗಿ ಆಸ್ಪತ್ರೆಗಳು ಕೋವಿಡ್ ಕೇರ್ ಸೆಂಟರ್ ಆರಂಭಿಸಿವೆ. 240 ಜನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 25 ಜನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕೊರೊನಾ ಸೋಂಕಿತರ ಜೊತೆಗೆ ನಾನು ಮಾತಾಡಿದಾಗ ಕೆಲವರು ಒಳ್ಳೆ ವ್ಯವಸ್ಥೆ ಇರುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಧಿಕಾರಗಳ ಜೊತೆಗೆ ಮಾತನಾಡಿ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ನಡೆಸಲು ಸರ್ಕಾರ ಆ್ಯಪ್ ಬಿಡುಗಡೆ ಮಾಡಿದೆ. ಅದರಲ್ಲಿ ತಮ್ಮ ಬೆಳೆಗಳನ್ನ ನೋಂದಣಿ ಮಾಡುವಂತೆ ರೈತರಿಗೆ ಮನವಿ ಮಾಡಿದರು. ಅಲ್ಲದೆ ಕ್ಯಾಶ್ ಅಪ್ಲಿಕೇಶನ್ ಮೂಲಕ ಗರ್ಭಿಣಿಯರ ಆರೋಗ್ಯ ನೋಂದಣಿ ಮಾಡಲು ಅಂಗವಾಡಿ ಸಹಾಯಕಿಯರಿಗೆ ಈಗಾಗಲೇ 42,000 ಮೊಬೈಲ್ಗಳು ಬಂದಿವೆ. ಪ್ರಾರಂಭದಲ್ಲಿ 11 ಜಿಲ್ಲೆಗಳಲ್ಲಿ ನೀಡಲಾಗಿತ್ತು. ಬಳಿಕ ಎಲ್ಲಾ ಜಿಲ್ಲೆಗೆ ವಿಸ್ತರಿಸಲಾಗಿದೆ.
ರಾಜ್ಯದಲ್ಲಿ 65,900 ಕ್ಕೂ ಅಧಿಕ ಅಂಗವಾಡಿಗಳಿದ್ದು, 15 ದಿನಗಳಲ್ಲಿ ಜಿಲ್ಲಾವಾರು ಹಂಚಿಕೆ ಮಾಡಲಾಗುವುದು. ಅಲ್ಲದೆ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಠಿಕ ಆಹಾರ ಹಂಚಿಕೆ ಮಾಡುವ ಕೆಲಸವನ್ನು ಅಗ್ರೋ ಕಾಪ್ಟ್ ಕಂಪನಿಗೆ ನೀಡಲಾಗಿತ್ತು. ಆರಂಭದಲ್ಲಿ 4 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವುಗಳ ವರದಿ ಆಧಾರಿತವಾಗಿ ಸಭೆ ನಡೆಸಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ವಿಮಾನ ನಿಲ್ದಾಣ ಕಾಮಗಾರಿ ಕುರಿತು ಗಂಭೀರವಾಗಿ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗಿದೆ. ನಾನು ಕೂಡ ಸ್ಥಳ ವೀಕ್ಷಣೆ ಮಾಡಿರುವೆ. ಹಣ ಕೂಡ ಬಿಡುಗಡೆಯಾಗಿದೆ. ಟೆಂಡರ್ ಪೂರ್ಣಗೊಳಿಸಿ ಬರುವ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.