ವಿಜಯಪುರ : ಜಿಲ್ಲೆಯ ಕತ್ನಳ್ಳಿಯ ಸದಾ ಶಿವಯ್ಯ ಸ್ವಾಮೀಜಿ ಮಠದಲ್ಲಿ ನಡೆದ ಜಾತ್ರಾ ಮಹೋತ್ಸವದ ಕೊನೆ ದಿನ ಶ್ರೀಗಳು ಕಾರ್ಣಿಕ ನುಡಿದರು. ಈ ಬಾರಿಯ ಭವಿಷ್ಯ ನುಡಿಯಲ್ಲಿ ಮುಖ್ಯವಾಗಿ ಮುಂದಿನ ಒಂದು ವರ್ಷದಲ್ಲಿ ನಡೆಯುವ ಘಟನೆಗಳನ್ನು ಕಾರ್ಣಿಕ ಮೂಲಕ ಹೇಳಿದ್ದಾರೆ.
ಕಳೆದ ವರ್ಷ ಜಾತ್ರೆ ನಡೆಯದ ಬಗ್ಗೆ ಪ್ರಸ್ತಾಪಿಸಿದ ಅವರು, ಭಕ್ತರು ಮತ್ತು ಸದಾಶಿವ ಮಠದ ಮಧ್ಯೆ ಹೋದ ವರ್ಷ ಆಕಳು ಕರುವನ್ನು ಮತ್ತು ಕರು ಆಕಳನ್ನು ಕಳೆದುಕೊಂಡಂಥ ಪರಿಸ್ಥಿತಿ ಎದುರಾಗಿತ್ತು. ನಾನು ಇಲ್ಲಿನ ಮಠದವರೆಗೆ ಬಂದು ಹೋಗಿದ್ದೆ. ಆದರೆ, ಕೊರೊನಾದಿಂದಾಗಿ ಜಾತ್ರೆಯನ್ನು ಕೇವಲ ಸಾಂಕೇತಿಕವಾಗಿ ಆಚರಿಸಲಾಗಿತ್ತು ಎಂದು ಸ್ಮರಿಸಿದರು.
ಈಗ ಪರಮಾತ್ಮ ಕೊರೊನಾ ರೂಪದಲ್ಲಿ ತನ್ನ ಆಟ ಆಡಿಸುತ್ತಿದ್ದಾನೆ. ನಂತರ ಅವನೇ ಎಲ್ಲವನ್ನೂ ಕಾಪಾಡುತ್ತಾನೆ. ಈಗಿರುವುದು ಸಾಮಾನ್ಯ ಪರೀಕ್ಷೆ, ಈಗಿರುವ ಕೊರೊನಾ ಇತರ ರೋಗಗಳಂತೆ ಪ್ರಭಾವ ಕಡಿಮೆಯಾದರೂ ಉಳಿಯಲಿದೆ. ಮುಂದೆ ಬರುವ ಬೇಸಿಗೆ ಕಾಲ ಯಾರನ್ನು ಬೆಸುಗೆ ಮಾಡುತ್ತೋ? ಯಾರನ್ನು ಬೇರ್ಪಡಿಸುತ್ತೋ? ಗೊತ್ತಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಅವ್ವ ಹಾರಿತ್ತು. ಕವ್ವ ಒದರಿತ್ತು. ದೆವ್ವ ಬೀಸಿತ್ತು. ಮೆವ್ವ ಮೀಗಿತ್ತು. ಕಾಕ ಕರೆದಿತ್ತು. ಹದ್ದು ಹಾರಾಡಿತ್ತು. ಜಗವೆಲ್ಲ ತಲ್ಲಣಗೊಂಡಿತ್ತು. ಗಲಿಬಿಲಿಗೊಂಡಿತ್ತು. ಆ ಗಲಿಬಿಲಿಯೊಳಗೆ ನಿಲುವು ಹಿಡಿದವು. ಮೇಲಾಗಿ ಇರುತ್ತಾನೆ. ಅದಕ್ಕಾಗಿ ಚಿಂತಿಸಿ ಫಲವಿಲ್ಲ. ಅಪಾಯವಿದ್ದಾಗ ಉಪಾಯವಿರುತ್ತದೆ. ನೀರನ್ನು ಎಷ್ಟು ಬಿಟ್ಟಾನು ಅದನ್ನು ಹೋಗಲು ಬಿಟ್ಟಿದ್ದಾನೆ ಎಂದು ಬುದ್ಧಿವಂತರೂ ಕೂಡ ಯೋಚಿಸಿ ಅರ್ಥೈಸಿ ಕೊಳ್ಳುವಂಥ ಭವಿಷ್ಯ ನುಡಿದಿದ್ದಾರೆ.
ಈ ಬಾರಿ ಮಳೆ, ಬೆಳೆ ಚೆನ್ನಾಗಿರಲಿದೆ. ಕೆಲವೊಬ್ಬರಿಗೆ ಜೀವನದಲ್ಲಿ ಬಹಳ ತೊಂದರೆಯಾಗಲಿದೆ. ಕೆಲವೊಬ್ಬರ ಸಂಸಾರದಲ್ಲಿ ಹಗಲು ಹೊತ್ತಿನಲ್ಲಿ ಹೊತ್ತು ಮುಳುಗಿದಂತೆ ಮುಸ್ಸಂಜೆಯಂತೆ ಭಾಸವಾಗಲಿದೆ. ಸಮನಾದ ಸಂವತ್ಸರದರಲ್ಲಿ ಈಜುವವನು ಜಯಿಸುತ್ತಾನೆ. ಪ್ರಾರ್ಥಿಸುವವನು ಮೇಲಾಗುತ್ತಾನೆ. ಸೇವೆ ಮಾಡುವವನು ಈಶನ ದಾಸನಾಗಿ ಮೋಕ್ಷನಾಗುತ್ತಾನೆ. ಈ ಕಾಲದಲ್ಲಿ ಯಾರೆಲ್ಲ ಏನು ಹೇಗೆ ಮಾಡುತ್ತೀರೋ ಆ ರೀತಿ ಫಲ ಪಡೆಯುತ್ತಾರೆ ಎಂದು ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಈ ವರ್ಷ ಹೊಳೆ ಸೆಳಿವಿನಲ್ಲಿ ಈಜಿ ಪಾರಾದವರು ಬದಕುತ್ತಾರೆ. ಸದಾಶಿವ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಾನೆ. ಅವನ ಮೇಲೆ ನಿಷ್ಠೆಯಿಂದ ಇದ್ದವನು ಉದ್ಧಾರವಾಗುತ್ತಾನೆ. ಅಷ್ಟೇ ಅಲ್ಲ, ಈ ಬಾರಿಯೂ ಬಾಂಬ್ ಸ್ಫೋಟ, ಭೂಕಂಪ, ಪಂಚ ಮಹಾಭೂತಗಳು ಒಂದನ್ನು ಬಿಟ್ಟು ನಾಲ್ಕು ಭೂತಗಳು ತಮ್ಮ ಪ್ರಭಾವ ತೋರಿಸುತ್ತವೆ. ಪೃಥ್ವಿ, ಜಲ, ಅಗ್ನಿ, ವಾಯು ಯಾವ ರೀತಿ ವರ್ತಿಸುತ್ತವೆ ಎಂಬುದು ತಿಳಿದಿಲ್ಲ ಎಂದು ಸ್ವಾಮೀಜಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ರಾಜಕೀಯ ಅದಲು-ಬದಲು : ರಾಜಕೀಯದಲ್ಲಿ ಅದಲು-ಬದಲು,ಕದಲು-ಬದಲು ಕಂಚಾಣವಾಗಲಿದೆ. ಕೆಲವೊಂದು ವರ್ಷಕ್ಕೆ ಒಂದು ವಿಶೇಷವಾಗಿ ಬದಲಾಗುತ್ತೆ. ಆದರೆ, ಅದರ ಸೂತ್ರಧಾರಿ ಅವನೇ ಇರುತ್ತಾನೆ ಎಂದು ನುಡಿದಿರುವ ಕಾರ್ಣಿಕರು, ಆಡು ಕಾಯುವವನ ಬುದ್ಧಿ, ನಾಡು ಕಾಯುವವನಿಗಿದ್ದರೆ ಆ ನಾಡು ಮತ್ತು ದೇಶಕ್ಕೆ ಶುಭವಾಗಲಿದೆ. ಅರಿಷ್ಠವಿಲ್ಲ, ಕಷ್ಟವಿಲ್ಲ, ನಷ್ಟವಿಲ್ಲ. ನಿಮಗೆ ಯಾರು ಬೇಕು ಯಾರು ಬೇಡ ಎಂಬುದನ್ನು ನೀವು ನಿರ್ಣಯಿಸಿ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಿ.
ಇದು ಪಕ್ಷಾತೀತ, ಜಾತ್ಯತೀತ, ವರ್ಣಾತೀತ, ಸಂಪ್ರದಾಯತೀತ ಮಠ. ಆಡು ನೀರು ಕುಡಿಯುವಾಗ ಹೊಳೆಯಿರಲಿ, ಹಳ್ಳವಿರಲಿ, ಕೊಳ್ಳವಿರಲಿ ತನ್ನ ಮೊಣಕಾಲನ್ನು ಮಡಚಿ ಆ ನೀರು ಒಂಚೂರೂ ಕಲುಕದಂತೆ ಕುಡಿಯುತ್ತದೆ. ಆದರೆ, ಉಳಿದ ಪ್ರಾಣಿಗಳು ನೀರಿಗೆ ಇಳಿದು ಜಲವನ್ನು ಗಲೀಜು ಮಾಡಿ ನೀರು ಕುಡಿಯುತ್ತವೆ. ಹೀಗಾಗಿ, ಎಲ್ಲರೂ ಆಡು ನೀರು ಕುಡಿಯುವಂತೆ ಮತ್ತೊಬ್ಬರಿಗೆ ಮಾರಕವಾಗದೆ ಪೂರಕವಾಗವಂಥ ಸಂಸಾರ ನಡೆಸಬೇಕು. ಅಂಥ ಭಕ್ತಿ ಮತ್ತು ಜ್ಞಾನವಿರುವ ಮಠ ಸದಾಶಿವ ಮಠದ ಸಂಪ್ರದಾಯದಂತೆ ನಡೆದುಕೊಳ್ಳಿ ಎಂದು ಕರೆ ನೀಡಿದ್ದಾರೆ.
ಬೆಸುಗೆ ಕಾಲ ಬಂದು ಹೋದ ನಂತರ ಇದೇ ಕಲಿಯುಗದಲ್ಲಿ 30 ವರ್ಷ ಸತ್ಯಯುಗ ಆರಂಭವಾಗಲಿದೆ. ಅದನ್ನು ನೋಡುವ ಅದೃಷ್ಠ ಯಾರಿಗಿದೆ ಗೊತ್ತಿಲ್ಲ. ಈ ಹಿನ್ನೆಲೆ ಎಲ್ಲರೂ ಸಮಾಜಮುಖಿ, ಪರೋಪಕಾರಿ ಕಾರ್ಯದಲ್ಲಿ ತೊಡಗುವಂತೆ ಸ್ವಾಮೀಜಿ ಹಿತವಚನ ಹೇಳಿದ್ದಾರೆ.