ವಿಜಯಪುರ: ಲಂಬಾಣಿ ಸಮುದಾಯಕ್ಕೆ ಹಕ್ಕುಪತ್ರ ವಿತರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಮ್ಮ ಜನಾಂಗಕ್ಕೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಲಂಬಾಣಿ ತಾಂಡಾಗಳನ್ಜು ಕಂದಾಯ ಗ್ರಾಮಗಳಾಗಿ ಮಾಡುವ ಕೆಲಸ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದಿತ್ತು. ಅಡುಗೆ ಮಾಡಿದ್ದು, ನಾವು ಆದರೆ ಬಿಜೆಪಿ ಬಡಿಸುವ ಕೆಲಸ ಮಾಡಿ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಕಿಡಿಕಾರಿದರು.
ವಿಜಯಪುರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಲಮಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಲು 1992 ರಿಂದಲೇ ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಪ್ರಕ್ರಿಯೆ ಆರಂಭಿಸಿತ್ತು. ಇದಕ್ಕೆ ರಾಷ್ಟ್ರಪತಿಗಳಿಂದ ಅನುಮೂದನೆ ಸಹ ಪಡೆದುಕೊಂಡಿತ್ತು. ಕಾಂಗ್ರೆಸ್ ಸರ್ಕಾರ ಬಂದಾಗೊಮ್ಮೆ ಕಂದಾಯ ಗ್ರಾಮಗಳ ಪರಿವರ್ತನೆಗೆ ವೇಗ ಪಡೆದುಕೊಳ್ಳುತ್ತಿರುವ ಕಾರಣ ಅಂದು 227 ತಾಂಡಾಗಳು ಕಂದಾಯ ಗ್ರಾಮ ಗಳಾಗಿದ್ದವು ಎಂದರು.
2013ರಲ್ಲಿ ಸಿದ್ದರಾಮಯ್ಯ ಸಿಎಂ ಆದ ಮೇಲೆ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡಲು ನರಸಿಂಹಯ್ಯ ನೇತ್ವತೃದ ಸಮಿತಿ ರಚನೆ ಮಾಡಿತ್ತು. ಅದರ ವರದಿ ನೀಡಿದೆ. ಅವರ ಅವಧಿಯಲ್ಲಿ ಹೆಚ್ಚು ಅನುದಾನ ಲಂಬಾಣಿ ತಾಂಡಾ ಅಭಿವೃದ್ಧಿಗೆ ನೀಡಿದ ಮೇಲೆ ಹಲವು ಕಡೆಗಳಲ್ಲಿ ಸಮುದಾಯ ಭವನ, ಸಂತ ಸೇವಾಲಾಲ್ ದೇವ ಸ್ಥಾನಗಳು ನಿರ್ಮಾಣವಾಗಿವೆ. ಈಗ ಕಲಬುಗಿಯಲ್ಲಿ 51ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದೆ. ಆದರೆ ಕಂದಾಯ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ನೀಡಲು ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರ ನೀಡಿಲ್ಲ ಎಂದು ಆರೋಪಿಸಿದರು.
ಲಂಬಾಣಿ ಸಮುದಾಯಕ್ಕೆ ಮಾರಕವಾಗಿರುವ ಸದಾಶಿವ ವರದಿ ತಿರಸ್ಕರಿಸಲಿ: ಪ್ರಧಾನಿ ನರೇಂದ್ರ ಮೋದಿ ಲಂಬಾಣಿ ಭಾಷೆ ಮಾತನಾಡಿ ನಮ್ಮವರನ್ನು ಮರಳು ಮಾಡಲು ಹೊರಟಿದ್ದಾರೆ. ಅವರಿಗೆ ನಿಜವಾಗಿ ಕಾಳಜಿ ಇದ್ದರೆ, ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು, ಲಂಬಾಣಿ ಸಮುದಾಯಕ್ಕೆ ಮಾರಕವಾಗಿರುವ ಸದಾಶಿವ ವರದಿ ತಿರಸ್ಕರಿಸಲಿ, ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಮಾಡುವಾಗ ಲಂಬಾಣಿ ಸಮುದಾಯದ ಭೂಮಿ ವಶಪಡಿಸಿಕೊಂಡಿದೆ. ಹೀಗಾಗಿ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರಿಡಬೇಕಾಗಿತ್ತು. ಇದರ ಜತೆ ಕಂದಾಯ ಗ್ರಾಮ ಪರಿವರ್ತನೆ ಮಾಡಿದ ಮೇಲೆ ಪ್ರತಿ ಕುಟುಂಬಕ್ಕೆ ಕೇವಲ 4000 ಚದರ್ ಅಡಿ ಹಕ್ಕು ಪತ್ರ ನೀಡಲಾಗಿದೆ. ಇನ್ನೂ ಹೆಚ್ಚುವರಿ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.
ಗುಳೆ ತಪ್ಪಿಸಲು ಏನು ಕ್ರಮ: ಪ್ರಧಾನಿ ನರೇಂದ್ರ ಭೂಮಿ ಕಲಬುರ್ಗಿಗೆ ಆಗಮಿಸಿ ಲಂಬಾಣಿ ಸಮುದಾಯಕ್ಕೆ ಹಕ್ಕುಪತ್ರ ನೀಡಿದ್ದಾರೆ ಹೊರತು, ಅವರು ದುಡಿಯಲು ಗುಳೆ ಹೋಗುವದನ್ನು ತಪ್ಪಿಸುವ ಯಾವುದೇ ಯೋಜನೆ ಬಗ್ಗೆ ಮಾತನಾಡಲಿಲ್ಲ. ಲಂಬಾಣಿಗಳ ಬಗ್ಗೆ ಕಾಳಜಿ ಇದ್ದರೆ ಗುಳೆ ತಪ್ಪಿಸಲು ಯೋಜನೆ ರೂಪಿಸಲಿ ಎಂದು ಆಗ್ರಹಿಸಿದರು.
ಸಚಿವ ಸಂಪುಟದಲ್ಲಿ ಸ್ಥಾನವಿಲ್ಲ: ಪ್ರಧಾನಿ ಮೋದಿ ತಮ್ಮ ಕೇಂದ್ರ ಸಂಪುಟದಲ್ಲಿ ನಮ್ಮ ಸಮುದಾಯದ ಒಬ್ಬ ಸಂಸದರಿಗೂ ಸಹ ಸಚಿವ ಸ್ಥಾನ ನೀಡಿಲ್ಲ. ಅವರದ್ದು ಕೇವಲ ವೋಟ್ ಬ್ಯಾಂಕ್ ರಾಜಕಾರಣವಾಗಿದೆ. ಹಕ್ಕು ಪತ್ರ ವಿತರಿಸಲು ಚುನಾವಣೆ ಹತ್ತಿರ ಇದೆ ಎನ್ನುವುದು ಮಾತ್ರ ಕಾರಣ ಹೊರತು, ಬೇರೆ ಯಾವುದೇ ಪ್ರೀತಿ ಇದರಲ್ಲಿ ಅಡಗಿಲ್ಲ ಎಂದು ಆರೋಪಿಸಿದರು.
ಖರ್ಗೆಗೆ ಆಹ್ಚಾನವಿಲ್ಲ ಏಕೆ: ಮೊನ್ನೆ ಕಲಬುರಗಿಯಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಿತ್ತು. ಆದರೆ ಶಿಷ್ಟಾಚಾರ ಮರೆತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಿಲ್ಲ ಎಂದ ಅವರು, ಲಂಬಾಣಿ ಸಮುದಾಯದ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಕ್ರೆಡಿಟ್ ಕೇವಲ ಬಿಜೆಪಿ ಪಡೆಯಲು ಯತ್ನಿಸುತ್ತಿದೆ. ಇದರ ಮೂಲ ಹೋರಾಟ ಕಾಂಗ್ರೆಸ್ ಪಕ್ಷದ್ದಾಗಿದೆ. ನಮಗೂ ಕ್ರೆಡಿಟ್ ನೀಡಲಿ ಎಂದರು.
ಇದನ್ನೂ ಓದಿ:ತಾಂಡಾ ನಿವಾಸಿಗಳಿಗೆ ದಾಖಲೆ ಪ್ರಮಾಣದಲ್ಲಿ ಹಕ್ಕು ಪತ್ರ: ಡಿಸಿ ಯಶವಂತ ಗುರುಕರ್ ಕಾರ್ಯಕ್ಕೆ ಸಭಾಪತಿ ಪ್ರಶಂಸೆ