ವಿಜಯಪುರ: ಗ್ರಾಮೀಣ ಭಾಗಕ್ಕೂ 24/7 ವಿದ್ಯುತ್ ನೀಡಲು ಹೆಸ್ಕಾಂ ಪ್ರಯತ್ನಿಸುತ್ತಿದೆ. ಆದರೂ ವಿದ್ಯುತ್ ಕಳ್ಳರ ಹಾವಳಿ ತಪ್ಪಿಲ್ಲ. ಇದರಿಂದಾಗಿ ವಿದ್ಯುತ್ ಕೊರತೆ ಹೆಚ್ಚಾಗಿದ್ದು, ವಿದ್ಯುತ್ ಪ್ರಸರಣಾ ನಿಗಮ ಸಮರ್ಪಕ ವಿದ್ಯುತ್ ಸರಬರಾಜಿಗೆ ಹೆಣಗಾಡುತ್ತಿದೆ. ಹೀಗಾಗಿ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಇದನ್ನೂ ಓದಿ...ಯುಗಾದಿಯೊಳಗೆ ಸಿಎಂ ಚೇಂಜ್: ಯತ್ನಾಳ್ ಮತ್ತೆ ಮತ್ತೆ ಹೊಸ ಬಾಂಬ್
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವಿಭಾಗದಡಿ ವಿಜಯಪುರ ವಿದ್ಯುತ್ ಪ್ರಸರಣ ನಿಗಮ ಬರುತ್ತದೆ. ಜಿಲ್ಲೆಯ 12 ತಾಲೂಕುಗಳಲ್ಲಿ 3 ಸಾವಿರಕ್ಕಿಂತಲೂ ಹೆಚ್ಚು ಗ್ರಾಮಗಳು ಒಳಪಟ್ಟಿದ್ದು, ವಾರದ 24 ಗಂಟೆಯೂ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಜಮೀನುಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿರುವ ಪ್ರಕರಣಗಳಿಗೇನು ಕಡಿಮೆ ಇಲ್ಲ.
ಜೊತೆಗೆ ಪಟ್ಟಣ ಪ್ರದೇಶದ ಹೊಸ ಬಡಾವಣೆಗಳಲ್ಲಿ ಅಕ್ರಮವಾಗಿ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿರುವುದು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಅಕ್ರಮ ತಡೆಗೆ ಹೆಸ್ಕಾಂ ತಾಲೂಕುವಾರು ವಿಚಕ್ಷಣಾ ದಳ ರಚಿಸಿದೆ. ವಿದ್ಯುತ್ ಕಳ್ಳತನ ಮಾಡಿಕೊಳ್ಳುವ ಮನೆ, ಹೊಲಗಳ ಮೇಲೆ ದಾಳಿ ನಡೆಸಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಅಧಿಕಾರ ಆ ತಂಡಕ್ಕೆ ಇದೆ.
ಪ್ರತೀ ತಿಂಗಳಲ್ಲೂ 10-15 ವಿದ್ಯುತ್ ಕಳ್ಳತನ ಪ್ರಕರಣ ದಾಖಲಾಗುತ್ತಿವೆ. ಆದರೆ ಶಿಕ್ಷೆಯಾಗುವುದೇ ಕಡಿಮೆ. ಕೇವಲ ದಂಡ ವಿಧಿಸಿ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಅಧಿಕೃತವಾಗಿ ಪರಿವರ್ತನೆ ಮಾಡಲಾಗುತ್ತಿದೆ. ಹೀಗಾಗಿ ವಿದ್ಯುತ್ ಕಳ್ಳತನ ಪ್ರಮಾಣ ಹೆಚ್ಚಾಗುತ್ತಿದೆ. ಕಠಿಣ ಕಾನೂನು ಜಾರಿಯಾದರೆ ಈ ಅಕ್ರಮ ತಡೆಯಬಹುದು ಎನ್ನುವುದು ಹೆಸ್ಕಾಂ ಅಧಿಕಾರಿಗಳ ಅಭಿಪ್ರಾಯ.