ವಿಜಯಪುರ : ದೇಶದಲ್ಲಿ ರಕ್ಕಸ ನೃತ್ಯ ನಡೆಸಿದ ಕೊರೊನಾ ಸೋಂಕಿನ ಅಟ್ಟಹಾಸದಿಂದಾಗಿ ಕೂಲಿ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಇತ್ತ ಭವಿಷ್ಯದ ಸುಂದರ ಕನಸು ಹೊತ್ತು, ದೂರದ ಊರುಗಳಿಗೆ ಉನ್ನತ ವ್ಯಾಸಂಗ, ಸ್ಪರ್ಧಾತ್ಮಕ ತರಬೇತಿಗೆ ತೆರಳಿದ ವಿದ್ಯಾರ್ಥಿ/ನಿಯರ ಗೋಳು ಹೇಳ ತೀರದಾಗಿದೆ.
ಇಂತಹ ವಿದ್ಯಾರ್ಥಿಗಳ ಶೋಚನೀಯ ಸ್ಥಿತಿ ನೆನದು, ಅವರ ಪಾಲಿಗೆ ಅನ್ನದಾತರಾದ ಪೊಲೀಸ್ ಅಧಿಕಾರಿಯೊಬ್ಬರ ಮಾನವೀಯ ಮಿಡಿತದ, ಮಾದರಿ ಕೆಲಸವಿದು. ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರ ನಾಯ್ಕೋಡಿ ಅವರು, ಸುಮಾರು 130 ವಿದ್ಯಾರ್ಥಿಗಳಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಿದ್ದಾರೆ. ಇಷ್ಟಲ್ಲದೇ ಹಣಕಾಸಿ ಸಹಾಯವನ್ನೂ ಮಾಡಿದ್ದಾರೆ.
ಪಿಜಿ ಮಾಲೀಕರೊಂದಿಗೆ ಚರ್ಚಿಸಿ, ರೂಮ್ ಬಾಡಿಗೆಯನ್ನು ಪಡೆಯದಂತೆ ಹೇಳಿದ್ದಾರೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ರಾಯಚೂರ ಮೂಲದ ವಿದ್ಯಾರ್ಥಿ ಬಾಸ್ಕರ್ ಪಟಗಿ ಹೇಳಿದ್ದಾರೆ. ಕಳೆದ 40 ದಿನಗಳಿಂದ ಪ್ರತಿ ದಿನ ವಿದ್ಯಾರ್ಥಿಗಳಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಿದ್ದಾರೆ. ಸದ್ಯ ಆಯಾ ಜಿಲ್ಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವ ವ್ಯವಸ್ಥೆ ಕೂಡಾ ಸಿಪಿಐ ರವೀದ್ರ ಸರ್ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿ ವರದಾ ಕಣ್ತುಂಬಿಕೊಂಡರು.
ಸಿಪಿಐ ರವೀಂದ್ರ ಅವರ ಜೊತೆ ಜೈನ್ ಸಮುದಾಯದ ಮುಖಂಡರು ಹಾಗೂ ರಾಮಕೃಷ್ಣ ಆಶ್ರಮ ಬೆನ್ನಲುಬಾಗಿ ನಿಂತಿದೆ. ಗದಗ, ರಾಯಚೂರು, ಬೆಳಗಾವಿ, ತುಮಕೂರು, ಬೀದರ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿದ್ದಾರೆ. ರಾಜ್ಯದ ವಿವಿಧೆಡೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ಕಳುಹಿಸುವ ಜವಾಬ್ದಾರಿಯನ್ನು ಸರ್ಕಾರ ಶೀಘ್ರವಾಗಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.